ಕಾಸರಗೋಡು: ಸಂಸದೀಯ ಕ್ಷೇತ್ರದಲ್ಲಿನ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅರೊಂದಿಗೆ ಚರ್ಚೆ ನಡೆಸಿದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿರುವ ವಿವಿಧ ರೈಲು ನಿಲ್ದಾಣಗಳ ಅಭಿವೃದ್ಧಿ, ಕೋವಿಡ್ ಅವಧಿಯಲ್ಲಿ ರದ್ದುಗೊಂಡ ರೈಲುಗಳ ನಿಲುಗಡೆಗಳನ್ನು ಮರುಸ್ಥಾಪಿಸುವ ಮತ್ತು ಅವಳಿ ಜಿಲ್ಲೆಗಳಲ್ಲಿನ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ರೈಲುಗಳಿಗೆ ಹೊಸ ನಿಲುಗಡೆಗೆ ಅವಕಾಶ ನೀಡುವ ಬೇಡಿಕೆಗಳನ್ನು ಸಚಿವರ ಮುಂದಿಡಲಾಯಿತು.
ಸ್ಥಗಿತಗೊಂಡಿರುವ ರೈಲುಗಳ ನಿಲುಗಡೆಯನ್ನು ಮರು ಸ್ಥಾಪಿಸುವುದರ ಜತೆಗೆ ಸಲ್ಲಿಕೆಯಾಗಿರುವ ಬೇಡಿಕೆಗಳಿಗೆ ಅಗತ್ಯ ಪ್ರಾಮುಖ್ಯತೆ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸದ್ಯದ ಆದಾಯ ಮತ್ತಿತರ ಅಂಶಗಳನ್ನು ಗಮನಿಸಿ, ರೈಲುಗಳಿಗೆ ಹೊಸದಾಗಿ ನಿಲುಗಡೆಗೆ ಅವಕಾಶ ಕಲ್ಪಿಸುವ ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ಬಗ್ಗೆ ಕೇಂದ್ರ ಸಚಿವರು ಭರವಸೆ ನೀಡಿರುವುದಾಗಿ ರಾಜ್‍ಮೋಹನ್ ಉಣ್ಣಿತ್ತಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಧ್ವನಿ:
ಕಾಸರಗೋಡಿನ ರೈಲ್ವೆ ಸಮಸ್ಯೆಗಳ ಬಗ್ಗೆ ಸಂಸದ ರಾಜ್‍ಮೋಹನ್ ಉನ್ಣಿತ್ತಾನ್ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ರೈಲ್ವೆ ಅಭಿವೃದ್ಧಿಯಲ್ಲಿ ಮಲಬಾರ್ ಪ್ರದೇಶದ ಬಗ್ಗೆ ಹಿಂದಿನಿಂದಲೂ ನಡೆಸುತ್ತಿರುವ ಅವಗಣನೆ ಕೊನೆಗಾಣಿಸಬೇಕು. ಬಹುತೇಕ ರೈಲುಗಳು ಕಣ್ಣೂರಿಗೆ ಯಾತ್ರೆ ಕೊನೆಗೊಳಿಸುತ್ತಿರುವುದರಿಂದ ಕಾಸರಗೋಡು, ಮಂಗಳೂರು ಭಾಗದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಕಾಸರಗೋಡು ರೈಲ್ವೆ ನಿಲ್ದಾಣದಿಂದ ವಾರ್ಷಿಕ 47ಕೋಟಿ ರೂ. ಆದಾಯ ಲಭಿಸುತ್ತಿದ್ದು, ಕಾಸರಗೋಡಿನಿಂದ ಮಂಗಳೂರು, ಕಣ್ಣೂರು ಭಾಗಕ್ಕೆ ರೈಲುಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ. ಕಾಸರಗೋಡಿನಿಂದ ಪ್ರತಿದಿನ ನೂರಾರು ಸಂಖ್ಯೆ ಪ್ರಯಾಣಿಕರು ಕೋಯಿಕ್ಕೋಡ್ ಭಾಗಕ್ಕೆ ಸಂಚರಿಸುತ್ತಿದ್ದು, ರೈಲುಗಳ ಕೊರತೆಯಿಂದ ಇರುವ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆಯಿಂದ ಸಂಚರಿಸಲಾಗದ ಸ್ಥಿತಿಯಿದೆ. ಕೋಯಿಕ್ಕೋಡಿನಿಂದ ಸಂಜೆ 5.10ರ ನಂತರ ಬೆಳಗಿನ ಜಾವ 1.10ಕ್ಕೆ ಕಾಸರಗೋಡಿಗೆ ರೈಲು ಸಂಚರವಿದ್ದು, ಹೆಚ್ಚಿನ ರೈಲು ಮಂಜೂರುಗೊಳಿಸುವ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸುವಂತೆ ಸಂಸದರು ಆಗ್ರಹಿಸಿದ್ದಾರೆ.