ಕೀವ್: ಕ್ರಿಸ್‌ಮಸ್ ದಿನವೂ ರಷ್ಯಾ ಮಿಲಿಟರಿ ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಥರ್ಮಲ್ ವಿದ್ಯುತ್ ಸ್ಥಾವರಗಳನ್ನು ಧ್ವಂಸ ಮಾಡಲಾಗಿದ್ದು, ಉಕ್ರೇನ್ ನಾಗರಿಕರು ಮೆಟ್ರೊ ನಿಲ್ದಾಣಗಳಲ್ಲಿ ಆಶ್ರಯ ಪಡೆಯುವಂತಾಗಿದೆ.
ಉಕ್ರೇನ್‌ನ ಇಂಧನ ಮೂಲಗಳನ್ನು ಧ್ವಂಸ ಮಾಡಲು ಖಂಡಾಂತರ ಕ್ಷಿಪಣಿಗಳು ಸೇರಿ 70ಕ್ಕೂ ಅಧಿಕ ಕ್ಷಿಪಣಿ, 100ಕ್ಕೂ ಹೆಚ್ಚು ಡ್ರೋನ್ ಬಳಸಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕ್ರಿಸ್‌ಮಸ್ ದಿನವೇ ಪುಟಿನ್ ದಾಳಿ ನಡೆಸಿದ್ದಾರೆ. ಎಂತಹ ಅಮಾನವೀಯತೆ?. ಉಕ್ರೇನ್ ದೇಶವು ಹೋರಾಡುತ್ತಲೇ ಇರುತ್ತದೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
50ಕ್ಕೂ ಅಧಿಕ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸುವುದರಲ್ಲಿ ಉಕ್ರೇನ್ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇಂಧನ ಮೂಲಸೌಕರ್ಯದ ಮೇಲೆ ಬೃಹತ್ ದಾಳಿ ಕುರಿತಂತೆ ಉಕ್ರೇನ್‌ನ ಇಂಧನ ಸಚಿವ ಹರ್ಮನ್ ಹಲುಶ್‌ಚೆಂಕೊ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪೂರ್ವ ಉಕ್ರೇನ್‌ನ ಹಾರ್ಕಿವ್, ನಿಪ್ರೊ ಮತ್ತು ಪೊಲ್ಟಾವಾದಲ್ಲಿ ಹಲವು ಕ್ಷಿಪಣಿ ದಾಳಿ ನಡೆದಿದೆ ಎಂದು ವಾಯುಪಡೆ ತಿಳಿಸಿದೆ.
ವಿದ್ಯುತ್ ವ್ಯವಸ್ಥೆಗೆ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ವಿತರಣಾ ವ್ಯವಸ್ಥೆಯ ನಿರ್ವಾಹಕರು ಬಳಕೆಯನ್ನು ಮಿತಿಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. .
ಬುಧವಾರ ಬೆಳಿಗ್ಗೆ ರಷ್ಯಾ ತಮ್ಮ ಥರ್ಮಲ್ ಪವರ್ ಪ್ಲಾಂಟ್‌ಗಳಲ್ಲಿ ಒಂದನ್ನು ಧ್ವಂಸಗೊಳಿಸಿದೆ. ಇದು ಈ ವರ್ಷ ಉಕ್ರೇನ್‌ನ ಪವರ್ ಗ್ರಿಡ್ ಮೇಲಿನ 13ನೇ ದಾಳಿಯಾಗಿದೆ ಎಂದು ಉಕ್ರೇನ್‌ನ ಅತಿದೊಡ್ಡ ಖಾಸಗಿ ಇಂಧನ ಕಂಪನಿ DTEK ತಿಳಿಸಿದೆ.