ಕೋಲ್ಕತ್ತ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವಕಾಶ ಸಿಕ್ಕರೆ ಮೈತ್ರಿಕೂಟವನ್ನು ಮುನ್ನಡೆಸುವುದಾಗಿ ಶುಕ್ರವಾರ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆಯಾಗಿರುವ ಅವರು, ಮುಖ್ಯಮಂತ್ರಿಯಾಗಿ ಮುಂದುವರಿಯುವುದರ ಜೊತೆಗೆ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ಸುದ್ದಿವಾಹಿನಿಗೆ ಮಾತನಾಡಿರುವ ಅವರು, 'ನಾನು ಇಂಡಿಯಾ ಬಣ ರಚಿಸಿದ್ದೆ. ಈಗ ಅದನ್ನು ನಿರ್ವಹಿಸಿಸುವುದು ಮುಂಚೂಣಿಯಲ್ಲಿರುವವರಿಗೆ ಬಿಟ್ಟದ್ದು. ಅವರು ಅದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ನಾನೇನು ಮಾಡಲಿ? ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಅಗತ್ಯವಿದೆ' ಎಂದಿದ್ದಾರೆ.
ನೀವು ಮೈತ್ರಿಕೂಟ ಮುನ್ನಡೆಸುವ ಹೊಣೆ ಹೊತ್ತುಕೊಳ್ಳುತ್ತಿಲ್ಲವೇಕೆ ಎಂಬ ಪ್ರಶ್ನೆಗೆ, 'ಅವಕಾಶ ನೀಡಿದರೆ ನಾನು ಅದರ ಸುಗಮ ಕಾರ್ಯಾಚರಣೆಯನ್ನು ಖಾತ್ರಿಪಡಿಸುತ್ತೇನೆ' ಎಂದು ಹೇಳಿದ್ದಾರೆ.
'ಬಂಗಾಳದಿಂದ ಹೊರಗೆ ಹೋಗುವ ಬಯಕೆಯಿಲ್ಲ. ಆದರೆ, ಇಲ್ಲಿಂದಲೇ ಇಂಡಿಯಾವನ್ನು ಮುನ್ನಡೆಸುವೆ' ಎಂದೂ ತಿಳಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ರಚನೆಯಾಗಿರುವ ಇಂಡಿಯಾ ಮೈತ್ರಿಕೂಟದಲ್ಲಿ ಹತ್ತಕ್ಕೂ ಹೆಚ್ಚು ಪಕ್ಷಗಳಿವೆ. ಅವುಗಳ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಮನ್ವಯದ ಕೊರತೆ ಇರುವುದರಿಂದ ಹಿನ್ನಡೆ ಅನುಭವಿಸುತ್ತಿದೆ.