ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಅಂಗನವಾಡಿಯ ಸಹಾಯಕಿ ಲಕ್ಷ್ಮಿ ಪದಮ್ (45) ಎಂಬವರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಮಹಿಳೆಯು ನಕ್ಸಲರ ಚಲನವಲನ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಅನುಮಾನದಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ತಿಮಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಏಕಾಏಕಿ ಲಕ್ಷ್ಮಿ ಅವರ ಮನೆಗೆ ನುಗ್ಗಿದ ನಕ್ಸಲರು, ಅವರ ಮನೆ ಮಂದಿಯ ಎದುರೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮನೆಯ ಅಂಗಳದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ನಕ್ಸಲರ ಪತ್ರವೊಂದು ದೊರೆತಿದ್ದು, ಇದರಲ್ಲಿ 'ಮಹಿಳೆಯು ಪೊಲೀಸರಿಗೆ ಮಾಹಿತಿ ನೀಡುವಂತೆ ವರ್ತಿಸುತ್ತಿದ್ದಾರೆ' ಎಂದು ಹತ್ಯೆಗೆ ಕಾರಣ ತಿಳಿಸಲಾಗಿದೆ. ಸ್ಥಳದಲ್ಲಿ ನಕ್ಸಲರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಯನ್ನೂ ಸೇರಿದಂತೆ, 7 ಜಿಲ್ಲೆಗಳನ್ನು ಒಳಗೊಂಡಿರುವ ರಾಜ್ಯದ ಬಸ್ತಾರ್ ಪ್ರದೇಶದಲ್ಲಿ ಈ ವರ್ಷ ನಕ್ಸಲರು ಒಟ್ಟು 60 ಮಂದಿಯನ್ನು ಹತ್ಯೆ ಮಾಡಿದ್ದಾರೆ.