ಅಲೀಗಢ : ರೈತ ಮುಖಂಡರ ಸಭೆಯಲ್ಲಿ ಭಾಗಿಯಾಗಲು ಗ್ರೇಟರ್ ನೊಯಿಡಾಗೆ ತೆರಳುತ್ತಿದ್ದ ಭಾರತೀಯ ಕಿಸಾನ್ ಯೂನಿಯನ್‌ನ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಅಲೀಗಢ ಪೊಲೀಸರು ಬುಧವಾರ ವಶಕ್ಕೆ ಪಡೆದರು.
ತನ್ನ ಬೆಂಬಲಿಗರೊಂದಿಗೆ ಟಿಕಾಯತ್ ಪ್ರಯಾಣಿಸುತ್ತಿದ್ದ ಬಸ್ ಅನ್ನು ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ತಡೆದ ಪೊಲೀಸರು, ಟಪ್ಪಲ್ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ಟಿಕಾಯತ್ ಅವರನ್ನು ಬಂಧಿಸಿಲ್ಲ. ಆದರೆ ವಶಕ್ಕೆ ಪಡೆದಿದ್ದೇವೆ' ಎಂದು ಅಲೀಗಢ ಪೊಲೀಸರು ಖಚಿತಪಡಿಸಿದ್ದಾರೆ.
'ಎಷ್ಟು ದಿನ ವಶದಲ್ಲಿಟ್ಟುಕೊಳ್ಳುತ್ತೀರಿ? ನಮ್ಮನ್ನು ಹೀಗೆ ಹಿಡಿದಿಟ್ಟರೆ, ಯಾರೊಂದಿಗೆ ಮಾತನಾಡಲಿದ್ದೀರಿ. ರೈತರು ನೊಯಿಡಾಗೆ ತೆರಳದಂತೆ ಗೌತಮ ಬುದ್ಧ ನಗರದಲ್ಲೇ ತಡೆಯಲಾಗಿದೆ. ಅಧಿಕಾರಿಗಳ ನಡವಳಿಕೆ ಇದೇ ರೀತಿ ಮುಂದುವರಿದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ' ಎಂದು ಟಿಕಾಯತ್ ಪತ್ರಕರ್ತರಿಗೆ ತಿಳಿಸಿದರು.
ಮುಜಾಪ್ಫರ್‌ನಗರದ ಸಿಸೌಲಿ ಗ್ರಾಮದ ಕಿಸಾನ್ ಭವನದಲ್ಲಿ ಬಿಕೆಯು ಮುಖಂಡ ನರೇಶ್ ಟಿಕಾಯತ್ ನೇತೃತ್ವದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ನೊಯಿಡಾ ಮತ್ತು ಗ್ರೇಟರ್ ನೊಯಿಡಾ ರೈತರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ.
ಗ್ರೇಟರ್ ನೊಯಿಡಾನಲ್ಲಿ ಬುಧವಾರ ಜಮಾಯಿಸುವಂತೆ ಬಿಕೆಯು ಕರೆ ನೀಡಿತ್ತು. ಅದರಂತೆ ನೂರಾರು ರೈತರು ಒಂದೆಡೆ ಸೇರಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.