ನವದೆಹಲಿ: ನಿಗದಿತ ಕಕ್ಷೆಗೆ ಉಪಗ್ರಹಗಳನ್ನು ಸೇರಿಸಲು ಬಳಸುವ 'ಗ್ರೀನ್ ಪ್ರೊಪಲ್ಷನ್ ಟೆಕ್ನಾಲಜಿ'ಯನ್ನು ಮುಂಬೈನ ಸ್ಟಾರ್ಟ್‌ಅಪ್ ಮನತ್ಸು ಸ್ಪೇಸ್ ಟೆಕ್ನಾಲಜಿಯು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಹಸ್ತಾಂತರಿಸಿತು.
ಸಂಸ್ಥೆಯ ತುಷಾರ್ ಜಾಧವ್, ಆಶ್ತೇಶ್ ಕುಮಾರ್ ಅವರು ಐಬೂಸ್ಟರ್ ಗ್ರೀನ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಡಿಆರ್‌ಡಿಒ ಅಧ್ಯಕ್ಷ ಸತೀಶ್ ಕಾಮತ್ ಅವರಿಗೆ ಬುಧವಾರ ಒಪ್ಪಿಸಿದರು.
100-500 ಕೆ.ಜಿ. ತೂಕದ ಉಪಗ್ರಹಗಳಿಗಾಗಿ ಈ ತಂತ್ರಜ್ಞಾನ ರೂಪಿಸಲಾಗಿದೆ. ಕಕ್ಷೆಗೆ ಉಪಗ್ರಹ ಸೇರಿಸುವುದು, ಕಕ್ಷೆಯಿಂದ ನಿರ್ಗಮನ ಪ್ರಕ್ರಿಯೆ ನಿರ್ವಹಣೆಗೆ ಇದು ಸಹಕಾರಿ.
ಉಲ್ಲೇಖಿತ ತಂತ್ರಜ್ಞಾನವನ್ನು ಇಸ್ರೊ, ತನ್ನ ಮುಂದಿನ ಪಿಎಸ್‌ಎಲ್‌ವಿ ಬೆಂಬಲಿತ ಉಪಗ್ರಹ ಉಡಾವಣಾ ಕಾರ್ಯಕ್ರಮಗಳಲ್ಲಿ ಪರೀಕ್ಷೆಗೊಳಪಡಿಸಲಿದೆ.
ಹೈಡ್ರೋಜನ್ ಪೆರಾಕ್ಸೈಡ್ ಆಧಾರಿತ ಇಂಧನವನ್ನು ಈ ತಂತ್ರಜ್ಞಾನದಡಿ ಬಳಸಲಾಗುವುದು. ಇದು ಅಧಿಕ ಸಾಮರ್ಥ್ಯ, ಸುರಕ್ಷತೆ ಮತ್ತು ಸುಸ್ಥಿರತೆಯ ಖಾತರಿಯನ್ನು ನೀಡಲಿದೆ.
ಹೊಸ ತಂತ್ರಜ್ಞಾನವು ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದ್ದು, ಡಿರ್‌ಡಿಒದ ಉಪಗ್ರಹ ಉಡಾವಣೆ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಇದು ವೃದ್ಧಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ತಂತ್ರಜ್ಞಾನ ಅಭಿವೃದ್ಧಿಗೆ ಡಿಆರ್‌ಡಿಒ ಸಹಕಾರದಲ್ಲಿ 4 ವರ್ಷ ಸಂಶೋಧನೆ ನಡೆದಿತ್ತು. 2017ರಲ್ಲಿ ಸ್ಥಾಪನೆಯಾಗಿರುವ ಮನತ್ಸು ಸ್ಪೇಸ್ ಟೆಕ್ನಾಲಜೀಸ್ ಸಂಸ್ಥೆಯು ಅಂತರಿಕ್ಷ ಸುರಕ್ಷತೆ, ಸುಸ್ಥಿರತೆ ಕುರಿತು ಗಂಭೀರ ಸವಾಲುಗಳಿಗೆ ಪರಿಹಾರ ಕಲ್ಪಿಸುವ ಗುರಿ ಹೊಂದಿದೆ.