ಕಾಸರಗೋಡು: ಪರಪ್ಪದಲ್ಲಿ ಮೇಯಲು ಬಿಟ್ಟಿದ್ದ ಆಡನ್ನು ಚಿರತೆ ಕೊಂದುಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಪ್ರದೇಶದ ಜನರಲ್ಲಿ ಆತಂಕ ಮನೆಮಾಡಿದೆ. ಇಲ್ಲಿನ ನಿವಾಸಿ ಗೋವಿಂದನ್ ಎಂಬವರ ಹತ್ತು ಆಡುಗಳನ್ನು ಮನೆ ಸನಿಹದ ಗುಡ್ಡದಲ್ಲಿ ಮೇಯಲು ಬಿಟ್ಟಿದ್ದು, ಇವುಗಳಲ್ಲಿ ಒಂದು ಆಡನ್ನು ಯಾವುದೋ ಪ್ರಾಣಿ ಅರ್ಧ ತಿಂದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಡುಗಳು ಜೋರಾಗಿ ಅರಚುತ್ತಿರುವುದನ್ನು ಕೇಳಿ ಮನೆಯವರು ಹಿತ್ತಿಲಿಗೆ ಧಾವಿಸುತ್ತಿದ್ದಂತೆ ಚಿರತೆ ಎಂದು ಶಮಕಿಸಿರುವ ಪ್ರಾಣಿ ಕಾಡಿಗೆ ಓಡಿ ಮರೆಯಾಗಿರುವುದಾಗಿ ಮನೆಯವರು ತಿಳಿಸಿದ್ದಾರೆ. ಈ ಬಗ್ಗೆ ನೀಡಿದ ಮಾಹಿತಿಯನ್ವಯ ವನಪಾಲಕರು ಹಾಗೂ ಸ್ಥಳೀಯರು ಆಗಮಿಸಿ ಹುಡುಕಾಟ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಕೆಲವು ದಿವಸಗಳ ಹಿಂದೆ ಮುಂಡತ್ತಡಂ, ಮಾಲೂರ್‍ಕಯಂ ಮುಂತಾದೆಡೆ ಚಿರತೆ ಕಂಡುಬಂದಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.