ಟ್ರಿಪೊಲಿ: ಶಸ್ತ್ರಸಜ್ಜಿತ ಬಂಡುಕೋರ ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ ಲಿಬಿಯಾದ ಹಲವು ತೈಲ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಪಶ್ಚಿಮ ಲಿಬಿಯಾದ ಪ್ರಮುಖ ತೈಲೋತ್ಪನ್ನ ಘಟಕ ಕಾರ್ಯಾಚರಣೆ ನಿಲ್ಲಿಸಿದೆ ಎಂದು ಸರ್ಕಾರಿ ಪೆಟ್ರೊಲ್ ಕಂಪನಿ ತಿಳಿಸಿದೆ.
ಗುಂಡಿನ ದಾಳಿಯಿಂದಾಗಿ ಝವಾಯಿಯಾದಲ್ಲಿರುವ ತೈಲ ಸಂಗ್ರಹಕ್ಕೆ ಭಾರಿ ಹಾನಿಯುಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ' ಎಂದು ಲಿಬಿಯಾದ ರಾಷ್ಟ್ರೀಯ ತೈಲ ನಿಗಮ (ಎನ್‌ಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಧಾನಿ ಟ್ರಿಪೊಲಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಝವಾಯಿಯಾ ತೈಲ ಶುದ್ದೀಕರಣ ಘಟಕದಲ್ಲಿ ಬೆಂಕಿ ಉರಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಬೆಂಕಿ ಮತ್ತು ಶಸ್ತ್ರಾಸ್ತ್ರ ಬಳಸಿ ತೈಲ ಘಟಕದ ಸಮೀಪ ಸಂಘರ್ಷ ನಡೆದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಸಂಘರ್ಷ ಮುಂದುವರಿದಿದ್ದು, ತುರ್ತು ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಗ್ಯಾಸ್ ಸೋರಿಕೆ ಹತೋಟಿಗೆ ಬಂದಿದೆ ಎಂದು ಎನ್‌ಒಸಿ ಹೇಳಿದೆ.
1974ರಲ್ಲಿ ಸ್ಥಾಪಿತವಾದ ಝವಯಿಯಾ ಘಟಕ ದಿನಕ್ಕೆ 1.20 ಲಕ್ಷಕ್ಕೂ ಅಧಿಕ ಬ್ಯಾರೆಲ್ ತೈಲವನ್ನು ಶುದ್ಧಿ ಮಾಡುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಎರಡನೇ ಅತಿ ದೊಡ್ಡ ತೈಲ ಘಟಕ.