ಮುಳ್ಳೇರಿಯ: ಭಾಷಾವಾರು ಪ್ರಾಂತ್ಯ ರಚನೆ ಬಳಿಕ ಗಡಿನಾಡು ಕಾಸರಗೋಡಿನಲ್ಲಿ ಮಲಯಾಳ ಶಾಲೆಯೊಂದರಲ್ಲಿ ಕನ್ನಡ ಮಾಧ್ಯಮ ಆರಂಭವಾಗಿರುವುದು ಸ್ವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ವಿಚಾರವಾಗಿರುವುದಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪೆÇ್ರ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ಶತಮಾನದ ಹೊಸ್ತಿಲಲ್ಲಿರುವ ಕಾರಡ್ಕದ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿದ ಸಂದರ್ಭ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕಾರಡ್ಕ ಶಾಲೆಯು ಮುಂದಿದ್ದು ಒಂದು ಮಾದರಿ ಸರಕಾರಿ ಶಾಲೆಯಾಗಿದೆ. ಭಾಷೆಗಳ ನಡುವೆ ಹಲವಾರು ಕುತೂಹಲಭರಿತ ಅಂಶಗಳಿದ್ದು, ಭಾಷೆಗಳ ಅಧ್ಯಯನದಿಂದ ನಾವು ಸಾಮರಸ್ಯ ಬೆಸೆಯಬಹುದಾಗಿದೆ ಎಂದು ತಿಳಿಸಿದರು. ಶಾಲೆ 13 ಎಕರೆ ವಿಸ್ತಾರದ ಜಾಗ ಹೊಂದಿದ್ದು, ಕನ್ನಡ ಕಟ್ಟಿ ಬೆಳೆಸುವಲ್ಲಿ ಈ ಊರಿನ ಮಲಯಾಳಿಗಳ ಸಹಕಾರವನ್ನೂ ಅವರು ಶ್ಲಾಘಿಸಿದರು. ಶಾಲೆಯ ವತಿಯಿಂದ ಗಣ್ಯರಿಗೆ ಗೌರವ ಸಲ್ಲಿಸಲಾಯಿತು. ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಕರ್ನಾಟಕ ಗಮಕ ಕಲಾ ಪರಿಷತ್ ಕೇರಳ ಘಟಕದ ಅಧ್ಯಕ್ಷ ಟಿ ಶಂಕರನಾರಾಯಣ ಭಟ್, ಪಿಟಿಎ, ಎಸ್ ಎಂ ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸಂಜೀವ ಎಂ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ವಂದಿಸಿದರು.