ಬದಿಯಡ್ಕ: ನಿರ್ದಿಷ್ಟವಾದ ಗುರಿಯನ್ನು ಮುಂದಿಟ್ಟುಕೊಂಡು ಬೆಳೆದ ಮಕ್ಕಳು ಸಾಧನೆಯ ಶಿಖರವನ್ನು ಏರಬಹುದು. ಉತ್ತಮ ಸಂಸ್ಕಾರ, ಸಂಸ್ಕøತಿಗೆ ಪೂರಕವಾದ ವಾತಾವರಣದಲ್ಲಿ ವಿದ್ಯಾರ್ಜನೆಯನ್ನು ಮಾಡಿದಾಗ ಭವಿಷ್ಯ ಉಜ್ವಲವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಜರಗಿದ `ಸಂಸ್ಕಾರ, ಸಂಸ್ಕøತಿ, ಆರೋಗ್ಯ' ವಿಚಾರ ಸಂಕಿರಣವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಸ್ತು ಮತ್ತು ನಡವಳಿಕೆಗಳು ಪ್ರಾಥಮಿಕ ಹಂತದಲ್ಲಿಯೇ ಪಠ್ಯದ ಜೊತೆಜೊತೆಗೆ ವಿದ್ಯಾರ್ಥಿಯ ಮನದಲ್ಲಿ ನೆಲೆನಿಲ್ಲಬೇಕು. ಇಲ್ಲಿಯ ಪರಿಸರವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವುದು ಕಂಡುಬರುತ್ತದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಿರಿಯರೊಂದಿಗೆ ಮುಕ್ತವಾಗಿ ಚರ್ಚಿಸುವುದು ಬಹಳಷ್ಟು ಕಡಿಮೆ ಕಂಡುಬರುತ್ತದೆ. ಹಿರಿಯರ ಬದುಕಿನ ವೃತ್ತಾಂತಗಳಲ್ಲಿರುವಂತಹ ಎಷ್ಟೋ ವಾಸ್ತವ ಘಟನೆಗಳ ಮೂಲಕ ಮಕ್ಕಳಿಗೆ ಅವರ ಜ್ಞಾನಾರ್ಜನೆಗೆ ಪಠ್ಯವಿಷಯವಾಗಲೂ ಬಹುದು. ಕೇವಲ ಪುಸ್ತಕದ ವಿಜ್ಞಾನಕ್ಕಿಂತಲೂ ಬದುಕಿನ ಜೀವನಾನುಭವಗಳ ರಸಧಾರೆ ವಿದ್ಯಾರ್ಥಿಗಳಿಗೆ ದೊರಕಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಭ್ಯಾಸ ಸಂಯೋಜಕಿಯರುಗಳಾದ ಮೂಕಾಂಬಿಕಾ ಎನ್.ರಾವ್, ಸರಿತಾ ಭಟ್, ಬಾಲವಿಕಾಸಕೇಂದ್ರದ ಸಂಪನ್ಮೂಲ ವ್ಯಕ್ತಿ ನಯನಾ ಶಿವಕುಮಾರ್ ವಿದ್ಯಾರ್ಥಿನಿಯರಿಗೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿಕೊಟ್ಟರು. ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಸಮರ್ಪಕವಾದ ಉದಾಹರಣೆಯೊಂದಿಗೆ ಉತ್ತರವನ್ನು ನೀಡಿದರು. 10ನೇ ತರಗತಿಯ ಬಿ. ಅನೀಶ್ ಸ್ವಾಗತಿಸಿ, 9ನೇ ತರಗತಿಯ ಸಿಂಧೂರ ವಂದಿಸಿದರು. 8ನೇ ತರಗತಿಯ ಕವನ ನಿರೂಪಿಸಿದಳು.