ನವದೆಹಲಿ: 'ಸಂವಿಧಾನ ತಿದ್ದುಪಡಿಗೆ ಬೇಕಾದ ಮೂರನೇ ಎರಡರಷ್ಟು ಬಹುಮತ ಬಿಜೆಪಿಗೆ ಇಲ್ಲ ಎಂಬುವುದನ್ನು ಲೋಕಸಭೆಯಲ್ಲಿ ಏಕಕಾಲಕ್ಕೆ ಚುನಾವಣೆ ಆಯೋಜಿಸುವ ಎರಡು ಮಸೂದೆಗಳನ್ನು ಪರಿಚಯಿಸುವ ಹಂತದಲ್ಲಿ ನಡೆದ ಮತದಾನ ತೋರಿಸಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.
ತೀವ್ರ ಚರ್ಚೆಗಳ ನಂತರ ಮಂಗಳವಾರ ಏಕಕಾಲಕ್ಕೆ ಚುನಾವಣೆ ನಡೆಸುವ(ಒಂದು ದೇಶ, ಒಂದು ಚುನಾವಣೆ) ಕಾರ್ಯವಿಧಾನಗಳನ್ನು ರೂಪಿಸುವ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಮಸೂದೆ ಪರವಾಗಿ 269 , ಮಸೂದೆ ವಿರುದ್ಧವಾಗಿ 198 ಸಂಸದರು ಮತ ಚಲಾಯಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, 'ಮಸೂದೆಯನ್ನು ನಾವು(ಕಾಂಗ್ರೆಸ್) ಮಾತ್ರ ವಿರೋಧಿಸಿಲ್ಲ. ಬಹುಪಾಲು ವಿರೋಧಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ. ಇದು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗಿದೆ. ಕೇಂದ್ರದಲ್ಲಿ ಸರ್ಕಾರ ಬಿದ್ದರೆ, ರಾಜ್ಯದಲ್ಲಿ ಸರ್ಕಾರ ಏಕೆ ಬೀಳಬೇಕು?' ಎಂದು ಕೇಳಿದರು.
'ಈ ರೀತಿಯ ಒಂದು ವ್ಯವಸ್ಥೆಯನ್ನು ಬದಲಾಯಿಸಲು ಹೋಗುವುದಕ್ಕೆ ಯಾವುದೇ ಅರ್ಥವಿಲ್ಲ.ಇದು ಸಂಪೂರ್ಣ ಮೂರ್ಖತನದ ಕೆಲಸ ಎಂಬುವುದು ನನ್ನ ಅಭಿಪ್ರಾಯವಾಗಿದೆ. ಏನೇ ಆಗಲಿ, ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಲು ಬೇಕಾದ ಮೂರನೇ ಎರಡರಷ್ಟು ಬಹುಮತ ಬಿಜೆಪಿಗೆ ಇಲ್ಲ ಎಂಬುವುದನ್ನು ಇಂದಿನ ಮತ ವಿಭಜನೆ ಸಾಬೀತುಪಡಿಸಿದೆ' ಎಂದು ಹೇಳಿದರು.
'ಸದನದಲ್ಲಿ ಮೂರನೇ ಎರಡಷ್ಟು ಬಹುಮತ ಪಡೆಯದಿದ್ದರೆ, ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈ ಚರ್ಚೆಗಳೆಲ್ಲ ನಿರರ್ಥಕ' ಎಂದು ಹೇಳಿದರು.