ನವದೆಹಲಿ: ಸಾರ್ವಜನಿಕರಿಗೆ ಈ ಹಿಂದೆ ಲಭ್ಯವಿದ್ದ ಕೆಲ ಚುನಾವಣಾ ದಾಖಲೆ ಮತ್ತು ಕಡತಗಳ ಪರಿಶೀಲನೆಯನ್ನು ನಿರ್ಬಂಧಿಸಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿದೆ.
1961ರ ಚುನಾವಣಾ ನಿಯಮದಲ್ಲಿ 93 (2)(ಎ) ಚುನಾವಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಸಾರ್ವಜನಿಕ ತಪಾಸಣೆಗೆ ಮುಕ್ತವಾಗಿರುತ್ತವೆ ಎಂದು ಹೇಳಲಾಗಿತ್ತು.
ಅದಕ್ಕೀಗ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ, ಚುನಾವಣೆಗೆ ಸಂಬಂಧಿಸಿದಂತೆ 'ನಿರ್ದಿಷ್ಟ' ದಾಖಲೆ, ಕಡತಗಳು ಮಾತ್ರ ಸಾರ್ವಜನಿಕರ ತಪಾಸಣೆಗೆ ಲಭ್ಯವಿರುತ್ತವೆ.
ಸಿಸಿಟಿವಿ ಕ್ಯಾಮೆರಾ, ವೆಬ್‌ಕಾಸ್ಟಿಂಗ್ ದೃಶ್ಯಾವಳಿಗಳು ಮತ್ತು ಅಭ್ಯರ್ಥಿಗಳ ವಿಡಿಯೊ ರೆಕಾರ್ಡಿಂಗ್‌ಗಳಂತಹ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾರ್ವಜನಿಕರ ತಪಾಸಣೆಯಿಂದ ಹೊರಗಿಡಲಾಗಿದೆ. ದುರುಪಯೋಗ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಈ ತಿದ್ದುಪಡಿಗಳನ್ನು ಮಾಡಲಾಗಿದೆ.
ಯಾವುದು ಲಭ್ಯ, ಅಲಭ್ಯ?:
ಅಭ್ಯರ್ಥಿಗಳ ನಾಮಪತ್ರಗಳು, ಚುನಾವಣಾ ಏಜೆಂಟರ ನೇಮಕ, ಫಲಿತಾಂಶ ಮತ್ತು ಚುನಾವಣಾ ಖರ್ಚು ವೆಚ್ಚದ ಮಾಹಿತಿಯು ತಿದ್ದುಪಡಿ ನಿಯಮದಲ್ಲಿ ಉಲ್ಲೇಖಿಸಲಾಗಿದ್ದು, ಅವುಗಳನ್ನು ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ಆದರೆ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು, ವೆಬ್‌ಕಾಸ್ಟಿಂಗ್ ದೃಶ್ಯಾವಳಿ ಮತ್ತು ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಅಭ್ಯರ್ಥಿಗಳ ವಿಡಿಯೊ ರೆಕಾರ್ಡಿಂಗ್‌ನಂತಹ ಎಲೆಕ್ಟ್ರಾನಿಕ್ ದಾಖಲೆಗಳನ್ನು ನಿಯಮಗಳಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಇವುಗಳ ಪರಿಶೀಲನೆಗೆ ನಿರ್ಬಂಧ ಇರುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮತಗಟ್ಟೆಗಳ ಒಳಗಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ದುರ್ಬಳಕೆ ಆಗಬಹುದು. ಅದರಿಂದ ಮತದಾರರ ಗೋಪ್ಯತೆಗೆ ಧಕ್ಕೆ ಆಗಬಹುದು. ಅಲ್ಲದೆ ಎಐ ತಂತ್ರಜ್ಞಾನ ಬಳಸಿಕೊಂಡು ದೃಶ್ಯಾವಳಿಗಳ ನಕಲಿ ತುಣುಕುಗಳನ್ನು ಸಿದ್ಧಪಡಿಸುವ ಸಾಧ್ಯತೆಯೂ ಇರುತ್ತದೆ. ಈ ರೀತಿಯ ದುರುಪಯೋಗಗಳನ್ನು ತಡೆಯುವುದು ಆಯೋಗದ ಉದ್ದೇಶ ಎಂದು ಅವರು ವಿವರಿಸಿದರು.
ಆದರೆ, ವಿಡಿಯೊ ದೃಶ್ಯಾವಳಿಗಳೂ ಸೇರಿದಂತೆ ಎಲ್ಲ ದಾಖಲೆಗಳು ಅಭ್ಯರ್ಥಿಗಳ ಪರಿಶೀಲನೆಗೆ ಲಭ್ಯವಿರುತ್ತವೆ. ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ ದಾಖಲೆಗಳ ಅಗತ್ಯವಿದ್ದರೆ ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
'ಚುನಾವಣಾ ಅಧಿಕಾರಿಗಳು ಸಿದ್ಧಪಡಿಸಿದ ದಾಖಲೆಗಳು, ಕ್ಷೇತ್ರಗಳ ಮ್ಯಾಪಿಂಗ್ ಮತ್ತು ವಿದ್ಯುನ್ಮಾನ ಮತಯಂತ್ರಗಳ ಚಲನೆ, ದೋಷಪೂರಿತ ಇವಿಎಂಗಳ ಬದಲಾವಣೆ, ಪೊಲೀಸರ, ಚುನಾವಣಾ ವೆಚ್ಚ ವೀಕ್ಷಕ ಅಧಿಕಾರಿಗಳ, ಚುನಾವಣಾ ಅಧಿಕಾರಿಗಳ ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ವರದಿಗಳನ್ನು ನಿಯಮದಲ್ಲಿ ಪ್ರಸ್ತಾಪಿಸಿಲ್ಲ' ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ತಿಳಿಸಿದರು.
ಚುನಾವಣೆಗಳು ನ್ಯಾಯೋಚಿತವಾಗಿ ನಡೆದಿವೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಈ ದಾಖಲೆಗಳು ಅತ್ಯಾವಶ್ಯಕ ಎಂದು ಅವರು ಪ್ರತಿಕ್ರಿಯಿಸಿದರು.
ತಿದ್ದುಪಡಿಗೆ ತರಾತುರಿ ಏಕೆ:
ಹರಿಯಾಣದ ವಿಧಾನಸಭಾ ಚುನಾವಣೆ ಕುರಿತ ಅಗತ್ಯ ದಾಖಲೆಗಳ ಪ್ರತಿಗಳನ್ನು ಸಂಬಂಧಿಸಿದ ವಕೀಲರಿಗೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಅದರ ಬೆನ್ನಲ್ಲೇ ಈ ತಿದ್ದುಪಡಿ ಆಗಿದೆ.
ವಕೀಲ ಮೆಹಮೂದ್ ಪ್ರಾಚಾ ಅವರು, ಹರಿಯಾಣ ಚುನಾವಣೆಗೆ ಸಂಬಂಧಿಸಿದ ವಿಡಿಯೊ ಚಿತ್ರೀಕರಣ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸೇರಿದಂತೆ ಕೆಲ ಮಾಹಿತಿಗಳನ್ನು ಕೋರಿದ್ದರು.
'ಚುನಾವಣಾ ಆಯೋಗ ಪಾರದರ್ಶಕ ವ್ಯವಸ್ಥೆಗೆ ಏಕೆ ಹೆದರಿದೆ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 'ತಿದ್ದುಪಡಿಯನ್ನು ಕಾನೂನುಬದ್ಧ ಹೋರಾಟ ನಡೆಸುತ್ತೇವೆ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. 'ಪಾರದರ್ಶಕ ವ್ಯವಸ್ಥೆಗೆ ಏಕೆ ಹೆದರಿದೆ'