ಚೆನ್ನೈ: ಕೇರಳದ ಎರಡು ಆಸ್ಪತ್ರೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ತಮಿಳುನಾಡುವಿನ ತಿರುನೆಲ್ವೇಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸುರಿಯಲಾಗುತ್ತಿದೆ. ಈ ತ್ಯಾಜ್ಯದಲ್ಲಿ ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಮತ್ತು ಕ್ರೆಡೆನ್ಸ್ ಆಸ್ಪತ್ರೆಯ ಜೈವಿಕ ತ್ಯಾಜ್ಯ, ರೋಗಿಗಳ ದಾಖಲೆಗಳು ಇವೆ.
ಕೇರಳ-ತಮಿಳುನಾಡು ಗಡಿಭಾಗದ ಗ್ರಾಮಗಳಾದ ತೇಣಿ, ಕನ್ಯಾಕುಮಾರಿ, ತೆಂಕಾಸಿಯ ಪ್ರದೇಶಗಳು ತ್ಯಾಜ್ಯಗಳನ್ನು ಸುರಿಯುವ ತಾಣಗಳಾಗಿವೆ. ಸ್ಥಳೀಯ ಭೂಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕಸ ಸುರಿಯುವ ವಿರುದ್ಧ ಆಕ್ಷೇಪ ಎತ್ತಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ.
ಇತ್ತೀಚೆಗೆ ತಿರುನೆಲ್ವೇಲಿ ಜಿಲ್ಲೆಯ ಕೊಡಗನಲ್ಲೂರು ಮತ್ತು ಪಲವೂರು ಗ್ರಾಮಗಳಲ್ಲಿಯೂ ಸುರಿಯಲಾಗುತ್ತಿದ್ದು, ರಾಜಕೀಯ ಪಕ್ಷಗಳ ಗಮನವನ್ನು ಸೆಳೆದಿದೆ. ತ್ಯಾಜ್ಯ ಸುರಿಯುವಿಕೆ ತಡೆಯದಿದ್ದರೆ, ಹೊಸ ವರ್ಷದಂದು ರಾಜ್ಯ ಬಿಜೆಪಿ ಘಟಕ ತ್ಯಾಜ್ಯಗಳನ್ನು ಮರಳಿ ಕೇರಳಕ್ಕೆ ಸುರಿಯುವ ಮೂಲಕ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದೆ.
ಗಡಿ ಗ್ರಾಮಗಳ ಖಾಲಿ ಪ್ರದೇಶಗಳಲ್ಲಿ ಹೀಗೆ ಲಾರಿಗಳಲ್ಲಿ ತಂದು ತ್ಯಾಜ್ಯ ಸುರಿಯಲಾಗುತ್ತಿದ್ದು, ಇವುಗಳನ್ನು ಮುಖ್ಯವಾಗಿ ಜೈವಿಕ ತ್ಯಾಜ್ಯಗಳಿಗೆ ಬೆಂಕಿ ಹಾಕಲಾಗುತ್ತಿದೆ. 'ಇದು ಸರಿಯಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕ್ರಮಕೈಗೊಳ್ಳಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, 'ಡಿಎಂಕೆ ಸರ್ಕಾರವು ಕೇರಳ ಸರ್ಕಾರದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಮುಖ್ಯಮಂತ್ರಿ ಎಂ.ಕೆ.ಸ್ವಾಲಿನ್ ಅವರೇ ಇದಕ್ಕೆ ಅವಕಾಶ ನೀಡುತ್ತಿದ್ದಾರೆ. ದೂರು ನೀಡಿದ್ದರೂ ಸ್ಥಳೀಯ ಅಧಿಕಾರಿಗಳು, ಮುಖ್ಯಮಂತ್ರಿಗಳ ವಿಶೇಷ ಘಟಕ ಯಾವುದೇ ಕ್ರಮವಹಿಸುತ್ತಿಲ್ಲ' ಎಂದು ಆರೋಪಿಸಿದ್ದಾರೆ.
ತಿರುನೆಲ್ವೇಲಿ ಜಿಲ್ಲಾಧಿಕಾರಿ ಕೆ.ಪಿ.ಕಾರ್ತಿಕೆಯನ್ ಅವರು, ಬಯಲಿನಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.