ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಸನಿಹದ ಪೂಚಕ್ಕಾಡ್ ನಿವಾಸಿ, ಅನಿವಾಸಿ ಭಾರತೀಯ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಮಾಂತ್ರಿಕೆ ಹಾಗೂ ಆಕೆಯ ಪತಿ ಸೇರಿದಂತೆ ನಾಲ್ಕು ಮಂದಿಯನ್ನು ವಿಶೇಷ ಪೊಲೀಸರ ತಂಡ ಪೆಬಂಧಿಸಿದೆ.
ಮೇಲ್ಪರಂಬ ಕುಳಿಕುನ್ನುವಿನ ಮಹಿಳಾ ಮಾಂತ್ರಿಕೆ ಶಮೀಮಾ ಯಾನೆ ಜಿನ್ನುಮ್ಮ (38), ಪತಿ ಉಬೈದ್ (40), ಪೂಚಕ್ಕಾಡ್ ನಿವಾಸಿ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40)ಬಂಧಿತರು.ಅಬ್ದುಲ್ ಗಫೂರ್ ಹಾಜಿ ಅವರ ಮೃತದೇಹ 2023 ಏ. 14ರಂದು ಮನೆಯೊಳಗೆ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಹಜ ಸಾವೆಂದು ತಿಳಿಸಿ ದಫನ ನಡೆಸಲಾಗಿದ್ದರೂ, ಪುತ್ರನ ದೂರಿನ ಮೇರೆಗೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಬಯಲಿಗೆ ಬಂದಿದೆ. ನಂತರ ನಡೆಸಿದ ತನಿಖೆಯಿಂದ 596 ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಬ್ದುಲ್ ಗಫೂರ್ ಅವರ ಪುತ್ರ ಅಹಮ್ಮದ್ ಮುಸಾಮ್ಮಿಲ್ ಬೇಕಲ ಠಾಣಾ ಪೆÇಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು. ವಾಮಾಚಾರದಲ್ಲಿ ತೊಡಗಿಸಿಕೊಂಡಿರುವ ಶಮೀಮಾ ಹಾಗೂ ಆಕೆಯ ಎರಡನೇ ಪತಿ ಉಬೈದ್ ಬಗ್ಗೆ ಅಹಮ್ಮದ್ ಮುಸಾಮ್ಮಿಲ್ ಶಂಕೆ ವ್ಯಕ್ತಪಡಿಸಿ, ಮುಖ್ಯಮಂತ್ರಿಗೂ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಚಿನ್ನಾಭರಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ವಾಮಚಾರದ ಹೆಸರಲ್ಲಿ ಸುಮಾರು 596 ಪವನ್ ಚಿನ್ನಾಭರಣ ಎಗರಿಸಿದ್ದು, ಬಳಿಕ ಚಿನ್ನಾಭರಣವನ್ನು ಗಫೂರ್ ಹಾಜಿ ಮರಳಿಸುವಂತೆ ಕೇಳಿದಾಗ ಕೊಲೆ ನಡೆಸಿರುವುದಾಗಿ ತನಿಖಾ ತಂಡ ತಿಳಿಸಿದೆ. 2023 ರ ಏಪ್ರಿಲ್ 14 ರಂದು ಗಫೂರ್ ಹಾಜಿ ಮಾತ್ರ ಮನೆಯಲ್ಲಿದ್ದ ಸಂದರ್ಭ ಕೃತ್ಯ ನಡೆದಿದೆ.