ಕೀವ್: ರಷ್ಯಾದ ಮೇಲೆ ಪ್ರತಿ ದಾಳಿ ನಡೆಸಿ ಕುರ್ಸ್ಕ್‌ನ ಭೂಪ್ರದೇಶ ಆಕ್ರಮಿಸಿಕೊಂಡಿದ್ದ ಉಕ್ರೇನ್ ಸೇನೆ ಈಗ ಅದನ್ನು ಕಳೆದುಕೊಳ್ಳುವ ಸ್ಥಿತಿಗೆ ಸಿಲುಕಿದೆ.
ಕಳೆದ ಐದು ತಿಂಗಳಿನಿಂದ ಕುರ್ಸ್ಕ್‌ನ ಬಹುಭಾಗ ಹಿಡಿತಕ್ಕೆ ಪಡೆದಿದ್ದ ಉಕ್ರೇನ್ ಸೇನೆ ಈಗ ರಷ್ಯಾದ ಪ್ರತಿದಾಳಿಗೆ ತತ್ತರಿಸಿದ್ದು, ಸಾವಿರಾರು ಸೈನಿಕರು ಸತ್ತಿರುವ ಶಂಕೆ ಇದೆ.
ಗಾಯಾಳು ಸೈನಿಕರು ಮತ್ತು ಮೃತಪಟ್ಟ ಸೈನಿಕರ ಶವಗಳನ್ನು ಸ್ಥಳಾಂತರಿಸಲು ಸಾಧ್ಯವಾಗದೆ, ಉಕ್ರೇನ್ ಸೇನೆ ಹತಾಶೆಗೆ ಸಿಲುಕಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
'ಇಲ್ಲಿ ಯುದ್ಧ ತುಂಬಾ ತೀವ್ರತೆ ಪಡೆದಿದೆ. ಸತ್ತವರ ಶವ ಸ್ಥಳಾಂತರಿಸಲು ಉಕ್ರೇನ್ ಸೇನಾ ಕಮಾಂಡರ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಸಂವಹನದ ಕೊರತೆ ಮತ್ತು ಕಳಪೆ ತಂತ್ರಗಾರಿಕೆಯಿಂದಾಗಿ ಬಹಳಷ್ಟು ಜೀವಹಾನಿಯಾಗಿದೆ. ಸೇನಾ ತುಕಡಿಗಳಿಗೂ ಪ್ರತಿದಾಳಿಗೆ ಮಾರ್ಗಗಳು ಇಲ್ಲದಂತಾಗಿದೆ' ಎಂದು ಏಳು ಮುಂಚೂಣಿ ಸೈನಿಕರು ಮತ್ತು ಕಮಾಂಡರ್‌ಗಳು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಚಿಸದೆ, ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಸೇನೆಯ ಮಿಂಚಿನ ಆಕ್ರಮಣದ ಅರಿವಿಲ್ಲದೆ ಕುರ್ಸ್ಕ್‌ನಲ್ಲಿ ಹಿಡಿತ ಕಳೆದುಕೊಂಡಿದ್ದ ರಷ್ಯಾ, ನಂತರ ತನ್ನ ಮಿತ್ರರಾಷ್ಟ್ರ ಉತ್ತರ ಕೊರಿಯಾದ ಸೈನಿಕರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಈ ಪ್ರದೇಶಕ್ಕೆ ನಿಯೋಜಿಸಿದೆ. ಉಕ್ರೇನ್ ಆಗಸ್ಟ್‌ನಲ್ಲಿ ಕುರ್ಸ್ಕ್‌ನಲ್ಲಿ ವಶಪಡಿಸಿಕೊಂಡ 984 ಚದರ ಕಿಲೋಮೀಟರ್ ಜಾಗದಲ್ಲಿ ಶೇ 40ರಷ್ಟನ್ನು ಈಗಾಗಲೇ ಕಳೆದುಕೊಂಡಿದೆ ಎನ್ನಲಾಗುತ್ತಿದೆ.
ಮೂರು ವರ್ಷಗಳ ಹಿಂದೆ ಆರಂಭಿಸಿದ ಪೂರ್ಣ ಪ್ರಮಾಣದ ಆಕ್ರಮಣದಲ್ಲಿ ಉಕ್ರೇನ್‌ನ ಐದನೇ ಒಂದು ಭಾಗವನ್ನು ರಷ್ಯಾ ಆಕ್ರಮಿಸಿಕೊಂಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕುರ್ಸ್ಕ್ ಮೇಲಿನ ನಿಯಂತ್ರಣವು, ರಷ್ಯಾ ಯುದ್ಧ ಕೊನೆಗೊಳಿಸುವ ಮಾತುಕತೆಗೆ ಬರುವಂತೆ ಒತ್ತಡ ಹೇರಲು ನೆರವಾಗಲಿದೆ ಎನ್ನುವ ಭರವಸೆಯನ್ನು ತಮ್ಮ ಬೆಂಬಲಿಗ ದೇಶಗಳಿಗೆ ನೀಡಿದ್ದಾರೆ.
ಆದರೆ, ಹೆಸರು ಬಯಸದ ಕೀವ್‌ನಲ್ಲಿರುವ ಐವರು ಉಕ್ರೇನ್ ಅಧಿಕಾರಿಗಳು ಮತ್ತು ಕೆಲವು ಪಾಶ್ಚಿಮಾತ್ಯ ಅಧಿಕಾರಿಗಳು, 'ಕುರ್ಸ್ಕ್‌ನಲ್ಲಿನ ಜೂಜಾಟದಿಂದ ಉಕ್ರೇನ್ ಭೂಭಾಗದ ಇಡೀ 1,000 ಕಿಲೋಮೀಟರ್ ಮುಂಭಾಗ ದುರ್ಬಲವಾಗುತ್ತಿದೆ ಮತ್ತು ದೇಶದ ಪೂರ್ವದಲ್ಲಿ ಅಮೂಲ್ಯ ನೆಲವನ್ನು ದಿನೇ ದಿನೇ ಕಳೆದುಕೊಳ್ಳಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.