ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಶುಕ್ರವಾರ ಸಂತಾಪ ಸೂಚಿಸಿದ್ದು, ಭಾರತಕ್ಕೆ ಅವರ ಕೊಡುಗೆಗಳು ಸದಾ ಸ್ಮರಣೀಯ ಎಂದು ಹೇಳಿದ್ದಾರೆ.
'ಭಾರತದ ಮಾಜಿ ಪ್ರಧಾನಿ ಮತ್ತು ದೇಶದ ಹಿರಿಯ ನಾಯಕ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ಇಡೀ ರಾಷ್ಟ್ರವು ಅತ್ಯಂತ ದುಃಖಿತವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರ ಕುಟುಂಬಕ್ಕೆ ಮತ್ತು ಅಸಂಖ್ಯಾತ ಪ್ರೀತಿಪಾತ್ರರಿಗೆ ಮತ್ತು ಅಭಿಮಾನಿಗಳಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಸಿಂಗ್ ಅವರು ಯಾವುದೇ ದೊಡ್ಡ ಹಿನ್ನೆಲೆಯಿಂದ ಬಂದಿರದಿದ್ದರೂ, ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಹೆಸರಾಂತ ಅರ್ಥಶಾಸ್ತ್ರಜ್ಞ ಡಾ. ಸಿಂಗ್ ಅವರು ಭಾರತಕ್ಕೆ ನೀಡಿರುವ ಕೊಡುಗೆಗಳನ್ನು ಯಾವಾಗಲೂ ಸ್ಮರಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ಅಗಲಿದ ಆತ್ಮಕ್ಕೆ 'ಸದ್ಗತಿ' ನೀಡುವಂತೆ ನಾವು ಸರ್ವಶಕ್ತನನ್ನು ಪ್ರಾರ್ಥಿಸುತ್ತೇವೆ' ಎಂದು ತಿಳಿಸಿದ್ದಾರೆ.
ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿದೆ.
2004-2014ರವರೆಗೆ 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಮತ್ತು ಅದಕ್ಕೂ ಮೊದಲು ಹಣಕಾಸು ಸಚಿವರಾಗಿ ದೇಶದ ಆರ್ಥಿಕತೆಯನ್ನು ವೃದ್ಧಿಸಲು ಸಹಾಯ ಮಾಡಿದ ಕಾಂಗ್ರೆಸ್ ನಾಯಕ, ಜಾಗತಿಕ ಹಣಕಾಸು ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಸರಾಗಿದ್ದರು.