ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಹಲವೆಡೆ ಆದಾಯ ತೆರಿಗೆ ಇಲಾಖೆಯ(ಐ.ಟಿ) 120ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
'ಕೆಲ ಉದ್ಯಮಿಗಳು ಆದಾಯ ತೆರಿಗೆ ಪಾವತಿಯಲ್ಲಿ ಅಕ್ರಮ ಎಸಗಿರುವ ಶಂಕೆಯಿದ್ದು, ಈ ಕಾರಣಕ್ಕೆ ಡಿಸೆಂಬರ್ 4ರಿಂದ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಐ.ಟಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
'ಚರ್ಚ್ ರಸ್ತೆ, ಫಿನಿಕ್ಸ್ ಬೇ, ಮರೀನಾ ಹಿಲ್ಸ್, ಅಬೇರ್ಡೀನ್ ಬಜಾರ್ ಮತ್ತು ದಿಲಾನಿಪುರದಲ್ಲಿರುವ ಕಚೇರಿಗಳಲ್ಲಿ ಕೋಲ್ಕತ್ತದ ಅಧಿಕಾರಿಗಳ ತಂಡ ಶೋಧ ನಡೆಸಿದೆ. ಬಬು ಲೇನ್, ಎಂ.ಜಿ ರೋಡ್, ಗುರುದ್ವಾರ ಲೇನ್ ಮತ್ತು ಜಂಗ್ಲಿಘಾಟ್ ಪ್ರದೇಶಗಳಲ್ಲಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಶೋಧ ಕಾರ್ಯದ ಬಗ್ಗೆ ಶೀಘ್ರದಲ್ಲಿ ಪೂರ್ಣ ಮಾಹಿತಿ ನೀಡುತ್ತೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತದ ಅಧಿಕಾರಿಗಳ ತಂಡವು ಡಿ.4ರಂದು ವೀರ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಶೋಧ ನಡೆಯಲಿರುವ ಕಚೇರಿಯ ಮಾಲೀಕರು ಪೋರ್ಟ್ ಬ್ಲೇರ್‌ನಿಂದ ನಿರ್ಗಮಿಸಲು ಅವಕಾಶ ನೀಡದಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಇಲಾಖೆಯ ಮೂಲಗಳು ತಿಳಿಸಿವೆ.