ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯು ಫೆಬ್ರುವರಿ ಅಂತ್ಯದೊಳಗೆ ನಡೆಯುವ ಸಾಧ್ಯತೆಯಿದೆ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ, ಅರ್ಧಕ್ಕಿಂತ ಹೆಚ್ಚು ರಾಜ್ಯ ಘಟಕಗಳಲ್ಲಿ ಸಾಂಸ್ಥಿಕ ಚುನಾವಣೆಯು ಪೂರ್ಣಗೊಂಡಿರಬೇಕು ಎಂಬುದು ಬಿಜೆಪಿಯ ನಿಯಮ.
ಅದರಂತೆ ಚಟುವಟಿಕೆಗಳು ಆರಂಭಗೊಂಡಿದ್ದು, ಜನವರಿ ಮಧ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶೇ 60ರಷ್ಟು ರಾಜ್ಯ ಘಟಕಗಳ ಅಧ್ಯಕ್ಷರ ಅಧಿಕಾರದ ಅವಧಿ ಮುಗಿದಿದ್ದು, ಮುಂದಿನ ತಿಂಗಳ ಮಧ್ಯಭಾಗದಲ್ಲಿ ಅವರ ಬದಲಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ನೂತನ ಅಧ್ಯಕ್ಷರು ಕೇಂದ್ರ ಸಚಿವರಾಗಿರಬಹುದೇ ಎಂದು ಪ್ರಶ್ನಿಸಿದ್ದಕ್ಕೆ, 'ಸಚಿವರು ಆಗಿರಬಹುದು ಅಥವಾ ಸಂಘಟನೆಯಿಂದಲೂ ಬರಬಹುದು. ಇನ್ನೂ ಯಾವುದೂ ತೀರ್ಮಾನವಾಗಿಲ್ಲ' ಎಂದು ಅವರು ಪ್ರತಿಕ್ರಿಯಿಸಿದರು.
ಕೇಂದ್ರ ಸಚಿವ ಜೆ.ಪಿ. ನಡ್ಡಾ 2020ರ ಫೆಬ್ರುವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಲೋಕಸಭಾ ಚುನಾವಣೆಗಾಗಿ ಇವರ ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು.
ರಾಷ್ಟ್ರೀಯ ಅಧ್ಯಕ್ಷರಾಗಿ ಅನುರಾಗ್?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಕೇಂದ್ರದ ಮಾಜಿ ಸಚಿವ, ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
'ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿ ವಿವಿಧ ಖಾತೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದ ಅನುರಾಗ್ ಪಕ್ಷ ಸಂಘಟನೆಯಲ್ಲೂ ಪಳಗಿದ್ದು, ಯುವ ಸಮೂಹದಲ್ಲೂ ಜನಪ್ರಿಯರಾಗಿದ್ದಾರೆ. ಅವರನ್ನು ಅಧ್ಯಕ್ಷ ಮಾಡುವುದಕ್ಕಾಗಿಯೇ ಈ ಬಾರಿ ಅವರಿಗೆ ಯಾವುದೇ ಖಾತೆ ನೀಡಿಲ್ಲ ' ಎಂದು ಮೂಲಗಳು ತಿಳಿಸಿವೆ.