ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಸ್ಥಿ ವಿಸರ್ಜನೆ ಸಂದರ್ಭ ಗಾಂಧಿ ಕುಟುಂಬದ ಯಾರೊಬ್ಬರು ಉಪಸ್ಥಿತರಿರಲಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕುಟುಂಬದ ಖಾಸಗಿತನವನ್ನು ಗೌರವಿಸುವ ಸಲುವಾಗಿ ಭಾಗಿಯಾಗಿರಲಿಲ್ಲ ಎಂದಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ, 'ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆ ನಂತರ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಿಂಗ್ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದರು' ಎಂದು ಹೇಳಿದರು.
'ಕುಟುಂಬದವರೊಂದಿಗೆ ಚರ್ಚಿಸಿದ ಬಳಿಕ, ಶವಸಂಸ್ಕಾರ ಸಮಯದಲ್ಲಿ ಕುಟುಂಬಕ್ಕೆ ಗೌಪ್ಯತೆ ಸಿಗದ ಕಾರಣ, ಕೆಲ ಕುಟುಂಬ ಸದಸ್ಯರಿಗೆ ಚಿತಾಗಾರವನ್ನೂ ತಲುಪಲು ಸಾಧ್ಯವಾಗದ ಕಾರಣ, ಅಸ್ಥಿ ವಿಸರ್ಜನೆ ವೇಳೆಯಲ್ಲಾದರೂ ಕುಟುಂಬದ ಗೌಪ್ಯತೆ ಕಾಪಾಡಬೇಕೆಂಬ ಅಭಿಪ್ರಾಯಕ್ಕೆ ಬರಲಾಯಿತು. ಅಸ್ಥಿ ವಿಸರ್ಜನೆಯು ಕುಟುಂಬಕ್ಕೆ ಅತ್ಯಂತ ಭಾವಾನಾತ್ಮಕ ಹಾಗೂ ನೋವಿನ ಸಂದರ್ಭವಾಗಿದೆ' ಎಂದು ತಿಳಿಸಿದರು.
ಮನಮೋಹನ ಸಿಂಗ್ ಅವರ ಅಸ್ಥಿಯನ್ನು 'ಮಜ್‌ನೂ ಕಾ ತಿಲಾ' ಗುರುದ್ವಾರದ ಬಳಿಯ ಯುಮುನಾ ನದಿಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಗಿದೆ.
ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಗ್ ಕುಟುಂಬಸ್ಥರು, ಸಿಖ್ ವಿಧಿವಿಧಾನಗಳ ಅನ್ವಯ ಜನವರಿ 1ರಂದು 'ಅಖಂಡ ಪಥ್' ನಡೆಸಲಿದ್ದಾರೆ. ಸಂಸತ್ತಿನ ಬಳಿಯಿರುವ ರಖಬ್ ಗಂಜ್ ಗುರುದ್ವಾರದ ಬಳಿ ಜನವರಿ 3ರಂದು 'ಭೋಗ್' ಕಾರ್ಯಕ್ರಮ, 'ಅಂತಿಮ್ ಅರ್ದಾಸ್' ಮತ್ತು 'ಕೀರ್ತನ್' ನಡೆಯಲಿವೆ.
92 ವರ್ಷದ ಸಿಂಗ್ ಅವರು ಆನಾರೋಗ್ಯದಿಂದಾಗಿ ಡಿ.26ರಂದು ನಿಧನ ಹೊಂದಿದ್ದರು. ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆಯಿತು.