ಕಾಸರಗೋಡು: ಕೇರಳವನ್ನು ಬೆಚ್ಚಿ ಬೀಳಿಸಿದ ಪೆರಿಯಾದ ಅವಳಿ ಕೊಲೆ ಪ್ರಕರಣದ ರಹಸ್ಯ ಭೇದಿಸಿ ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸಿಬಿಐ ಕಾರ್ಯವೈಖರಿಯನ್ನು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಕೆ. ಶ್ರೀಕಾಂತ್ ಶ್ಲಾಘಿಸಿದ್ದಾರೆ. ಈ ಅವಳಿ ಕೊಲೆ ಪ್ರಕರಣದಲ್ಲಿ ಸಿಪಿಎಂನ ಉನ್ನತ ನೇತಾರರ ಪಾತ್ರವನ್ನು ಸಾಬೀತುಪಡಿಸಲು ಸಿಬಿಐಗೆ ಸಾಧ್ಯವಾಗಿದೆ. ಅವಳಿ ಕೊಲೆಗೆ ಸಿಪಿಎಂ ನಾಯಕತ್ವವೇ ಯೋಜನೆ ತಯಾರಿಸಿದ್ದು, ಸಿಬಿಐನ ಹುರುಪಿನ ತನಿಖೆ ಮತ್ತು ನ್ಯಾಯಾಲಯದ ಮುಂದೆ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸಿರುವುದು ನ್ಯಾಯಕ್ಕೆ ಸಂದ ಗೆಲುವಾಗಿದೆ. ಪ್ರಮುಖ ಆರೋಪಿಗಳ ವಿರುದ್ಧದ ಅಪರಾಧವನ್ನು ಸಾಬೀತುಪಡಿಸಲು ಮತ್ತು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಪ್ರಾಸಿಕ್ಯೂಷನ್ ಸಮರ್ಥ ವಾದ ಕಾರಣವಾಗಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ. ರಾಜಕೀಯ ಎದುರಾಳಿಗಳನ್ನು ದಮನಿಸುವ ಸಿಪಿಎಂ ನೀತಿಗೆ ಪ್ರಸಕ್ತ ತೀರ್ಪಿನಿಂದ ಬಲವಾದ ಹೊಡೆತ ಸಿಕ್ಕಿದೆ.
ಪೆರಿಯಾ ಅವಳಿ ಕೊಲೆ ನಡೆಸಿರುವುದರ ಜತೆಗೆ ಸಿಪಿಎಂ, ಕೊಲೆಗಾರರನ್ನು ರಕ್ಷಿಸಲು ಮತ್ತು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದೆ. ಪೆÇಲೀಸರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳದಂತೆ ಸಿಪಿಎಂ ಮುಖಂಡರು ಆರೋಪಿಗಳಿಗೆ ರಕ್ಷಣೆ ಒದಗಿಸಿದ್ದರು.
ಹೈಕೋರ್ಟ್ ತೀರ್ಪಿನ ವಿರುದ್ಧ ಸ್ವತಃ ಪಿಣರಾಯಿವಿಜಯನ್ ನೇತೃತ್ವದ ಸರ್ಕಾರ ಮೇಲ್ಮನವಿ ಸಲ್ಲಿಸುವ ಮೂಲಕ ಸಿಪಿಎಂ, ರಾಜ್ಯ ಸರ್ಕಾರ ಮತ್ತು ಪೆÇಲೀಸರ ಸಂಪೂರ್ಣ ಬೆಂಬಲ ಮತ್ತು ಸಹಕಾರದ ಹೊರತಾಗಿಯೂ, ಸಿಬಿಐಗೆ ಪ್ರಕರಣದ ಸತ್ಯಾಸತ್ಯತೆ ಸಾಬೀತುಪಡಿಸಲು ಸಾಧ್ಯವಾಯಿತು.
'ಇಂಡಿಯಾ'ಒಕ್ಕೂಟದಿಂದ ಹೊರ ಹಾಕಲಿ:
ತಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರಿಬ್ಬರನ್ನು ಬರ್ಬರವಾಗಿ ಕೊಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂನ್ನು 'ಇಂಡಿಯಾ'ಒಕ್ಕೂಟದಿಂದ ಹೊರಗಿರಿಸಲು ಕಾಂಗ್ರೆಸ್ ಒತ್ತಡಹೇರಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹುತಾತ್ಮರ ಬಗ್ಗೆ ಪ್ರಾಮಾಣಿಕ ಕಾಳಜಿಯಿದ್ದರೆ, ಈ ಕೆಲಸ ಮೊದಲು ನಡೆಸಬೇಕು ಎಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.