ಕಾಸರಗೋಡು: ಬೋವಿಕ್ಕಾನ ಕಾವುಪಾಡಿ ನಿವಾಸಿ ಎಡನೀರು ಅಬ್ದುಲ್ಲ ಎಂಬವರ ಪುತ್ರ ರಾಶಿದ್(24)ಅವರ ಮೃತದೇಹ ಇವರ ಮನೆಯಿಂದ ಅನತಿ ದೂರದಲ್ಲಿರುವ ಶೆಡ್ ಒಂದರ ಸನಿಹ ನಿಗೂಢವಾಗಿ ಪತ್ತೆಯಾಗಿದೆ. ಕುಳಿತ ಭಂಗಿಯಲ್ಲಿ ಮೃತದೇಹ ಕಂಡು ಬಂದಿದ್ದು, ಕಾಲಿನಿಂದ ರಕ್ತ ಸೋರುತ್ತಿತ್ತು. ಮನೆಯಿಂದ ನೂರು ಮೀ. ದೂರದ ಈ ಶೆಡ್ಡಿನಲ್ಲಿ ರಾಶಿದ್ ವಾಸಿಸುತ್ತಿದ್ದು, ತಾಯಿ ಆಯಿಷಾಬಿ ಬುಧವಾರ ಆಹಾರ ತೆಗೆದುಕೊಂಡು ಶೆಡ್ಡಿನಬಳಿ ತೆರಳಿದಾಗ ರಶಿದ್ ಅಲ್ಲಿರಲಿಲ್ಲ. ಆಹಾರ ಶೆಡ್ಡಿನೊಳಗಿರಿಸಿ ಮನೆಗೆ ವಾಪಸಾಗಿ ಮೊಬೈಲ್ ಕರೆಮಾಡಿದಾಗ ಕರೆ ಸ್ವೀಕರಿಸದಿರುವುದರಿಂದ ಸಂಶಯಗೊಂಡು ಹುಡುಕಾಡಿದಾಗ ಮ್ರತದೇಹ ಪತ್ತೆಯಾಗಿದೆ.
ರಾಶಿದ್ ಬೆಂಗಳೂರಿನಲ್ಲಿ ಸಹೋದರರೊಂದಿಗೆ ಹೋಟೆಲ್‍ನಲ್ಲಿ ಸಹಾಯಕರಾಗಿ ದುಡಿಯುತ್ತಿದ್ದು, ಇತ್ತೀಚೆಗಷ್ಟೆ ವಾಪಸಾಗಿದ್ದರು. ಬೆಂಗಳೂರಿಗೆ ವಾಪಸಾಗುವ ಸಿದ್ಧತೆ ಮಧ್ಯೆ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿನೀಡಿ ತಪಾಸಣೆ ನಡೆಸಿದರು. ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹ ಉನ್ನತ ಶವಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.