ಕಾಸರಗೋಡು: ಸಮಾಜದ ಕಟ್ಟಕಡೆಯ ಹಿಂದುಳಿದ ವ್ಯಕ್ತಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಪರೇಷನ್ ಸ್ಮೈಲ್ ಮಹತ್ವದ ಯೋಜನೆಯಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೆ. ರಾಜನ್ ಹೇಳಿದರು.
ಅವರು ಕೊರಗ ಸಮುದಾಯದವರು ವಾಸಿಸುತ್ತಿರುವ 'ಉನ್ನತಿ'ಗಳಲ್ಲಿ ಅವರ ಕೈವಶವಿರುವ ಭೂಮಿಗೆ ಹಕ್ಕುಪತ್ರ ನೀಡುವ 'ಆಪರೇಷನ್ ಸ್ಮೈಲ್' ಯೋಜನೆಯನ್ನು ಆನ್ ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದರು. ಬಡವರಿಗೆ ಆಸರೆಯಾಗುವುದು ಕೇರಳ ಸರ್ಕಾರದ ನಿಲುವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರಾಕ್ತನ ಬುಡಕಟ್ಟು ಜನಾಂಗದವರ ಭೂಮಿಗೆ ಕಂದಾಯ ಇಲಾಖೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಸಚಿವರು ಹೇಳಿದರು. ಜಿಲ್ಲೆಯ ಕಾಸರಗೋಡು, ಮಂಜೇಶ್ವರ ತಾಲೂಕುಗಳ 51 ಉನ್ನತಿಗಳಲ್ಲಿ 539 ಕುಟುಂಬಗಳ 194 ಹೆಕ್ಟೇರ್ ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ಯೋಜನೆಯನ್ನು ಸಚಿವರು ಶ್ಲಾಘಿಸಿದರು. ಈ ಸಂದರ್ಭ ಯೋಜನೆಯ ಯಶಸ್ಸಿಗಾಗಿ ಶ್ರಮಿಸಿದ ಜಿಲ್ಲಾಧಿಕಾರಿ, ಸರ್ವೆ ಮತ್ತು ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಯನ್ನು ಸಚಿವರು ಅಭಿನಂದಿಸಿದರು.