ಕೋಯಿಕ್ಕೋಡ್ (PTI): 'ಮಲಯಾಳ ಚಿತ್ರೋದ್ಯಮದಲ್ಲಿ ಮಹಿಳೆಯರ ಶೋಷಣೆ ಮತ್ತು ಕಿರುಕುಳ ಕುರಿತು ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರವು ಯಾವುದೇ ವಿಷಯವನ್ನು ಮುಚ್ಚಿಟ್ಟಿಲ್ಲ' ಎಂದು ಸಂಸ್ಕೃತಿ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.
ಅಲ್ಲದೆ ಸಮಿತಿ ಮಾಡಿರುವ ಶಿಫಾರಸುಗಳನ್ನು ಜಾರಿಗೊಳಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಈ ಪ್ರಕರಣವು ಸದ್ಯ ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ಪಾಲಿಸಲಿದೆ' ಎಂದು ತಿಳಿಸಿದರು.
'ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಂತಹ ಸಮಿತಿಯೊಂದನ್ನು ರಚಿಸಲಾಗಿದೆ' ಎಂದು ಸಚಿವರು ಒತ್ತಿ ಹೇಳಿದರು.
'ರಾಜ್ಯ ಮಾಹಿತಿ ಆಯೋಗದ ಸೂಚನೆಯಂತೆ ವರದಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಸಾರ್ವಜನಿಕರ ಮುಂದಿಡಲಾಗಿದೆ. ಪ್ರತಿ ವಿಚಾರವು ಪಾರದರ್ಶಕವಾಗಿದೆ. ಸಿನಿಮಾ ನೀತಿಯೂ ಸೇರಿದಂತೆ ಹೇಮಾ ಸಮಿತಿಯ ಎಲ್ಲ ಶಿಫಾರಸುಗಳನ್ನು ಸರ್ಕಾರವು ಜಾರಿಗೊಳಿಸಲು ಬದ್ಧವಾಗಿದೆ' ಎಂದು ಸಜಿ ಚೆರಿಯನ್ ಸ್ಪಷ್ಟಪಡಿಸಿದರು.
'ಸರ್ಕಾರವು ಚಲನಚಿತ್ರ ನೀತಿಯನ್ನು ರಚಿಸಲಿದೆ. ವರದಿ ಜಾರಿ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ಲೋಪಗಳಾಗಿಲ್ಲ. ಕಾನೂನು ಕೌಕಟ್ಟಿನ ಒಳಗಡೆ ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ' ಎಂದರು.