ವಯನಾಡ್: 'ಭಾರತ ಪ್ರತಿನಿಧಿಸುವ ನಿಜವಾದ ಮೌಲ್ಯಗಳು ವಯನಾಡ್‌ನಲ್ಲಿ ನೆಲೆಸಿವೆ' ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಹೇಳಿದರು.
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಪ್ರಿಯಾಂಕಾ ಅವರು ಮತದಾರರಿಗೆ ಧನ್ಯವಾದ ಸಲ್ಲಿಸಲು ಕ್ಷೇತ್ರದ ಹಲವೆಡೆ ರ್‍ಯಾಲಿ ಹಾಗೂ ಸಭೆಗಳನ್ನು ನಡೆಸುತ್ತಿದ್ದಾರೆ.
'ವಯನಾಡ್‌ನಲ್ಲಿ ಸಂಭವಿಸಿದ ಭಾರಿ ಭೂಕುಸಿತವು ಈ ಭಾಗದ ಎಲ್ಲ ಜನರ ಮನೆಗಳನ್ನು ನಾಶ ಮಾಡಿತು. ಇಲ್ಲಿ ನೆಲೆಸಿದ್ದ ಕುಟುಂಬಗಳು ಕೊಚ್ಚಿಹೋದವು. ಆದರೆ, ಇಂಥ ದುರಂತದ ಸಮಯದಲ್ಲಿಯೂ, ನೋವಿನಲ್ಲಿಯೂ ನೀವು ಯಾರ ಜಾತಿಯನ್ನೂ ಯಾರ ಧರ್ಮವನ್ನೂ ಕೇಳಲಿಲ್ಲ. ಎಲ್ಲರಿಗೂ ಸಹಾಯಹಸ್ತ ಚಾಚಿದಿರಿ. ಇದನ್ನು ನಾನು ಸ್ವತಃ ನನ್ನ ಕಣ್ಣುಗಳಿಂದ ನೋಡಿದ್ದೇನೆ. ನಿಮ್ಮಲ್ಲಿನ ಮಾನವೀಯತೆಯನ್ನು ನಾನು ಕಂಡಿದ್ದೇನೆ' ಎಂದರು.
'ಹಿಮಾಚಲ ಪ್ರದೇಶದಲ್ಲಿಯೂ ಒಂದೂವರೆ ವರ್ಷದ ಹಿಂದೆ ಇಂಥದ್ದೇ ದುರಂತ ನಡೆದಿತ್ತು. ಹಿಮಾಚಲದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎನ್ನುವ ಕಾರಣಕ್ಕೆ ಜನರ ಪುನರ್‌ವಸತಿಗೆ ಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡಲೇ ಇಲ್ಲ. ಅಧಿಕಾರಸ್ತರು ಇಂಥ ಸಂದರ್ಭಗಳಲ್ಲಿ ರಾಜಕೀಯ ಮಾಡಬಾರದು. ಇಲ್ಲಿಯೂ ಇಂಥದ್ದೇ ರಾಜಕೀಯವನ್ನು ಕೇಂದ್ರ ಮಾಡುತ್ತಿದೆ' ಎಂದರು.
ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಕೇರಳದ ಮಾನಂದವಾಡಿಯಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ನಮಸ್ಕರಿಸಿದರು -ಪಿಟಿಐ ಚಿತ್ರ.
......................................................