ಉಪ್ಪಳ: ವಿಶ್ವ ವಿಕಲಚೇತನ ದಿನದ ಅಂಗವಾಗಿ ಎಸ್.ಎಸ್.ಕೆ ಕಾಸರಗೋಡು, ಬಿಆರ್.ಸಿ. ಮಂಜೇಶ್ವರ ಹಾಗೂ ಮುಳಿಂಜ ಶಾಲಾ ವಿದ್ಯಾರ್ಥಿಗಳನ್ನೊಳಗೊಂಡು ರ್ಯಾಲಿ ಗುರುವಾರ ನಡೆಯಿತು. ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದರು. ವಿಕಲ ಚೇತನ ವಿಶೇಷ ಸಾಮಥ್ರ್ಯದ ಮಕ್ಕಳಲ್ಲಿ ವಿಭಿನ್ನ ಸಾಮಥ್ರ್ಯಗಳಿವೆ ಅದನ್ನು ಪರಿಪೋಷಿಸಿ ಸಮಾಜದ ಮುಖ್ಯ ಧಾರೆಗೆ ತರಬೇಕು. ಸಮಾಜದಲ್ಲಿ ಅವರಿಗೂ ಅಂಗೀಕಾರ ಗೌರವಾಧಾರಗಳು ತೋರಬೇಕು. ಅಂತವರಿಗೆ ಅನುಕಂಪದ ಜೊತೆಜೊತೆಗೆ ಅವಕಾಶ ನೀಡಬೇಕು. ದೈನಂದಿನ ಚಟುವಟಿಕೆಗಳಲ್ಲಿ, ಆಟಪಾಠಗಳಲ್ಲಿ ಸಮಾನತೆ ತೋರುತ್ತಾ ಅವಕಾಶಗಳನ್ನು ನೀಡಿ ಅಂಗೀಕಾರ ಕೊಟ್ಟು ಅವರಲ್ಲಿ ಸ್ವಾಭಿಮಾನವನ್ನು ಸ್ವಾಯತ್ತತೆಯನ್ನು ಬೆಳೆಸಬೇಕು. ಶಾರೀರಿಕ ನ್ಯೂನತೆಯಿಂದುಂಟಾದ ಚಿಂತೆ, ಖಿನ್ನತೆ, ನಿರಾಸಕ್ತಿಯನ್ನು ತೊಡೆದು ಹಾಕಿ ಇತರ ಮಕ್ಕಳಂತೆ ತನ್ನ ಸೃಜನಶೀಲತೆಯನ್ನು ಪ್ರಕಟಿಸುತ್ತಾ ಮಾನಸಿಕವಾಗಿ ಬಲಿಷ್ಠರಾಗಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ. ಅಲ್ಲದೆ ಇದು ಹೆತ್ತವರಿಗೂ ಸಮಾಜಕ್ಕೂ ಸ್ಪೂರ್ತಿದಾಯಕವಾಗುವುದರ ಜೊತೆಗೆ ಮಾನಸಿಕ ಸಂಘರ್ಷದಿಂದ ಸಂಕುಚಿತ ಮನೋಭಾವದಿಂದ ಹೊರಬಂದು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಸನ್ನದ್ಧರಾಗಬೇಕೆಂಬ ಸಂದೇಶ ನೀಡಿದರು.
ಈ ಕಾರ್ಯಕ್ರಮವನ್ನು ಆಯೋಜಿಸಿ ನಿರ್ವಹಿಸಿದ ಸ್ಪೆಷಲ್ ಎಜುಕೇಟರ್ ರೀಮಾ ಮೊಂತೇರೊ ರ್ಯಾಲಿಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು. ಮಂಜೇಶ್ವರ ಪಂಚಾಯತಿ ಸದಸ್ಯ ಅಬ್ದುಲ್ ರೆಹಮಾನ್ ಟಿ.ಎಮ್, ಹಿರಿಯ ಶಿಕ್ಷಕ ರಿಯಾಜ್ ಪೆರಿಂಗಡಿ, ಅಬ್ದುಲ್ ಬಶೀರ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು ಮಾತನಾಡಿದರು. ಮುಳಿಂಜ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು. ಬಿ.ಆರ್.ಸಿಯ ಸ್ಪೆಷಲ್ ಎಜುಕೇಟರ್ ಸರಿತ ಸ್ವಾಗತಿಸಿ, ಭವ್ಯ ವಂದಿಸಿದರು.