ಬೆಂಗಳೂರು: ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 'ಕುವೆಂಪು ರಾಷ್ಟ್ರೀಯ ಪುರಸ್ಕಾರ'ಕ್ಕೆ ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರ ₹5 ಲಕ್ಷ ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಶರೀಫಾ ವಿಜಲಿವಾಲಾ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ಪುರುಷೋತ್ತಮ ಬಿಳಿಮಲೆ ಸಮಿತಿಯಲ್ಲಿದ್ದರು.
ಗುಜರಾತ್‌ನ ಸೂರತ್‌ನ ಹಿಮಾಂಶಿ ಶೆಲತ್ ಅವರು ಹೊಸತನದ ಬರವಣಿಗೆ ಶೈಲಿಯಿಂದ ಗುಜರಾತಿ ಹಾಗೂ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಪ್ರಬಂಧ, ಸಾಹಿತ್ಯ ವಿಮರ್ಶೆ ಹಾಗೂ ಅನುವಾದ ಪ್ರಕಾರಗಳಲ್ಲಿ ಅವರ 20 ಪುಸ್ತಕಗಳು ಪ್ರಕಟವಾಗಿವೆ ಎಂದು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು 2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.