ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠದ ಮನೆಯ ವಿದ್ಯಾ ಕೆ.ಎಂ. ಅವರು ಭೂಗರ್ಭಶಾಸ್ತ್ರದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿರುವರು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಎಂ.ಎಸ್.ಸಿ. ಪದವಿಯನ್ನು ಪಡೆದಿರುವ ಇವರು ಕುಂಬಳೆ ಶಿರಿಯಾ ನದಿಯ ಕುರಿತು ಮಂಡಿಸಿದ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಮನೋಹರನ್ ಎ.ಎನ್. ಅವರ ಮಾರ್ಗದರ್ಶನದಲ್ಲಿ ಇವರು ಈ ಸಾಧನೆಯನ್ನು ಮಾಡಿರುತ್ತಾರೆ.
ಎಳವೆಯಿಂದಲೇ ಯಕ್ಷಗಾನ ಕಲಾವಿದೆಯಾದ ಇವರು, ಪುಂಡುವೇಷಗಳನ್ನು ನಿರ್ವಹಿಸುತ್ತಾರೆ. ನೀರ್ಚಾಲು ಕುಂಟಿಕಾನ ಮಠದ ಆಡಳಿತ ಮೊಕ್ತೇಸರ ಕೆ.ಎಂ.ಶಂಕರನಾರಾಯಣ ಭಟ್ಟ ಮತ್ತು ವಿಜಯಲಕ್ಷ್ಮೀ ದಂಪತಿ ಪುತ್ರಿಯಾಗಿದ್ದು, ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಆನಂದ ಕೆಕ್ಕಾರು ಅವರ ಪತ್ನಿಯಾಗಿದ್ದಾರೆ. ಬದಿಯಡ್ಕ ರಂಗಸಿರಿ ಸಾಂಸ್ಕøತಿಕ ವೇದಿಕೆಯಲ್ಲಿ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಕುಂಟಿಕಾನ ಶಾಲೆ, ನೀರ್ಚಾಲು ಶಾಲೆ ಹಾಗೂ ಎಡನೀರು ಸ್ವಾಮೀಜೀಸ್ ಶಾಲೆಯ ಹಳೆವಿದ್ಯಾರ್ಥಿನಿಯಾಗಿದ್ದಾರೆ.