ಕಾಸರಗೋಡು: ಖಾಸಗಿ ವಾಹನಗಳನ್ನು ಬೇಕಾಬಿಟ್ಟಿ ಬಾಡಿಗೆಗೆ ನೀಡುವವರ ವಿರುದ್ಧ ಮೋಟಾರು ವಾಹನ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ವಾಹನಗಳನ್ನು ವೈಯ್ಯಕ್ತಿಕ ಒಪ್ಪಂದದ ಮೇರೆಗೆ ಬಾಡಿಗೆಗೆ ಒದಗಿಸುತ್ತಿರುವುದನ್ನು ಪತ್ತೆಹಚ್ಚಲು ಇಲಾಖೆ ಈಗಾಗಲೇ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಹತ್ತಕ್ಕೂ ಹೆಚ್ಚು ವಹನಗಳನ್ನು ಜಿಲ್ಲೆಯ ವಿವಿಧೆಡೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜಿಲ್ಲೆಯ ಹಲವು ಮಂದಿ ಖಾಸಗಿ ವಾಹನ ಮಾಲಿಕರು ತಮ್ಮ ವಾಹನಗಳನ್ನು ಬಾಡಿಗೆಗೆ ನೀಡುತ್ತಿರುವ ಬಗ್ಗೆ ಟ್ಯಾಕ್ಸಿ ವಾಹನ ಮಾಲಿಕರು ಕಳೆದ ಹಲವು ವರ್ಷಗಳಿಂದ ಇಲಾಖೆಗೆ ದೂರು ಸಲ್ಲಿಸುತ್ತಾ ಬಂದಿದ್ದರೂ, ಈ ಬಗ್ಗೆ ಕಠಿಣ ಕ್ರಮಕ್ಕೆ ಇಲಾಖೆ ಮುಂದಾಗಿರಲಿಲ್ಲ. ಕೇರಳದ ಆಲಪ್ಪುಳದಲಿಳಿತ್ತೀಚೆಗೆ ವ್ಯಕ್ತಿಯೊಬ್ಬರ ಖಾಸಗಿ ಕಾರು ಬಾಡಿಗೆಗೆ ಪಡೆದು ತೆರಳುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ಸಿಗೆ ಡಿಕ್ಕಿಯಾಗಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಮೋಟಾರು ವಆಹನ ಇಲಾಖೆ ರೆಂಟೆಡ್ ವಾಹನ ವ್ಯವಹಾರಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬಹುತೇಕ ಮಂದಿ ತಮ್ಮ ಖಾಸಗಿ ವಾಹನಗಳನ್ನು ಮೋಟಾರು ವಾಹನ ಇಲಾಖೆಯ ಎಲ್ಲ ನಿಬಂಧನೆ ಗಾಳಿಗೆ ತೂರಿ ಬಾಡಿಗೆಗೆ ನೀಡುತ್ತಿದ್ದಾರೆ. ಖಾಸಗಿ ಓಡಾಟಕ್ಕಿರುವ ತಮ್ಮ ವಾಹನ ಬಾಡಿಗೆಗೆ ನೀಡುವ ಮೂಲಕ ಕೆಲವರು ಇದನ್ನು ಒಂದು ಉದ್ಯಮವಾಗಿಸಿಕೊಂಡಿದ್ದಾರೆ. ಇದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ. ಇಂತಹ ವಾಹನಗಳನ್ನು ಪತ್ತೆ ಹಚ್ಚಿ ಮೊದಲಿಗೆ ದಂಡ ವಿಧಿಸಲಾಗುವುದು, ಅಪರಾಧ ಆವರ್ತಿಸಿದರೆ ಲೈಸನ್ಸ್ ರದ್ದು ಪಡಿಸಿ, ವಾಹನದ ಆರ್.ಸಿ ಕೂಡಾ ರದ್ದುಪಡಿಸುವುದಾಗಿ ಮೋಟಾರು ವಾಹನ ಇಲಾಖೆ ಎನ್ಫೋರ್ಸ್ ಮೆಂಟ್ ಆರ್.ಟಿ.ಒ. ರಾಜೇಶ್ ಪಿ ತಿಳಿಸಿದ್ದಾರೆ.
ಖಾಸಗಿ ವಾಹನಗಳನ್ನು ದಿನಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ನೀಡುತ್ತಿರುವುದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ರೀತಿ ವಾಹನ ಬಾಡಿಗೆಗೆ ನೀಡುವ ಹಕ್ಕು ಮಾಲಕರಿಗಿಲ್ಲ. ಆದರೆ ಜಿಲ್ಲೆಯಲ್ಲಿ ಮೋಟಾರು ವಾಹನ ಇಲಾಖೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಲ್ಲದ ಪರಿಣಾಮ ರೆಂಟೆಡ್ ವಾಹನ ವ್ಯವಹಾರ ವ್ಯಾಪಕಗೊಳ್ಳಲು ಕಾರಣವಾಗಿದೆ.
ಬಹುತೇಕ ಮಂದಿ ಈ ರೀತಿ ಕಾರು ಬಾಡಿಗೆಗೆ ಪಡೆದು ಗಾಂಜಾ ಸಾಗಾಟ, ಕಳ್ಳತನ ಸಹಿತ ಅಪರಾಧ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಮೂಲಕ ವಾಹನ ಮಾಲಕರೂ ಪ್ರಕರಣಗಳಲ್ಲಿ ಅಪರಾಧಿಯಾಗಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದೂ ಇಲಾಖೆ ಅದಿಕಾರಿಗಳು ಎಚ್ಚರಿಸಿದ್ದಾರೆ.