ಕೊಚ್ಚಿ: 2007ರಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಹಿರಿಯ ನಟ, ನಿರ್ದೇಶಕ ಬಾಲಚಂದ್ರ ಮೆನನ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಕೇರಳ ಹೈಕೋರ್ಟ್, ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ಗೌರವ ಮತ್ತು ಘನತೆ ಇದೆ ಎಂದು ಹೇಳಿದೆ.
ತಮಗೆ ಕಿರುಕುಳ ನೀಡಲಾಗಿದೆ ಎಂದು 17 ವರ್ಷಗಳ ಬಳಿಕ ನಟಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಇದರಲ್ಲಿ ನನ್ನ ಗೌರವ ಮತ್ತು ಘನತೆ ಹಾಳುಮಾಡುವ ಉದ್ದೇಶವಿದೆಯೇ ಹೊರತು ಬೇರೇನೂ ಅಲ್ಲ ಎಂದು ಮೆನನ್ ವಾದಿಸಿದ್ದರು. ಮೆನನ್ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿಯ ವಾದದಲ್ಲಿ ಹುರುಳಿದೆ. 17 ವರ್ಷಗಳ ಬಳಿಕ ದೂರು ನೀಡಲಾಗಿದೆ. ಆರೋಪಿಯು ಖ್ಯಾತ ಸಿನಿಮಾ ನಟ. 40ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
'ಸಂತ್ರಸ್ತ ನಟಿಯ ಹೇಳಿಕೆಯನ್ನು ಆಧರಿಸಿ ನೋಡುವುದಾದರೆ, 17 ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿರುವುದು ಸತ್ಯ. ಗೌರವ ಮತ್ತು ಘನತೆ ಕೇವಲ ಮಹಿಳೆಯರಿಗೆ ಸೀಮಿತವಲ್ಲ ಎಂಬುದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಪುರುಷರಿಗೂ ಗೌರವ ಮತ್ತು ಘನತೆ ಇದೆ. ನ್ಯಾಯದ ದೃಷ್ಟಿಯಿಂದ ಈ ಪ್ರಕರಣದಲ್ಲಿ ಜಾಮೀನು ನೀಡಬಹುದು'ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಅಲ್ಲದೆ, ನಿರ್ದೇಶಕ ಮೆನನ್ ಅವರು ಎರಡು ವಾರಗಳಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಪೀಠ ಆದೇಶಿಸಿದೆ.
'ವಿಚಾರಣೆ ಬಳಿಕ ತನಿಖಾಧಿಕಾರಿಯು ಮೆನನ್ ಅವರನ್ನು ಬಂಧಿಸಲು ಬಯಸಿದರೆ, ₹50,000 ಬಾಂಡ್ ಮತ್ತು ಇಬ್ಬರ ಶೂರಿಟಿ ಪಡೆದು ಬಿಡುಗಡೆ ಮಾಡಬೇಕು'ಎಂದು ನ್ಯಾಯಪೀಠ ಹೇಳಿದೆ.
ಮಲಯಾಳಂ ಚಿತ್ರರಂಗದಲ್ಲಿ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆ ಸಲ್ಲಿಕೆಯಾದ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬೆನ್ನಲ್ಲೇ ನಟಿ ದೂರು ದಾಖಲಿಸಿದ್ದರು.