ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್(BR Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ರಾಜ್ಯಸಭೆಯಲ್ಲಿ(Rajyasabha) ನೀಡಿದ ಹೇಳಿಕೆಯು ಪ್ರತಿಪಕ್ಷಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಎರಡು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಇದೆಲ್ಲದರ ನಡುವೆ ಪ್ರತಾಪ್ ಚಂದ್ರ ಸಾರಂಗಿ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಅವರ ವೈಯಕ್ತಿಕ ಮತ್ತು ರಾಜಕೀಯ ಬದುಕಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಾಮಾನ್ಯ ಬಡ ಕುಟುಂಬದ ವ್ಯಕ್ತಿಯೊಬ್ಬ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಮತ್ತು ಪ್ರಭಾವಿ ರಾಜಕಾರಣಿಯಾಗಿ ಬೆಳೆದದ್ದು ಹೇಗೆ? ಅಷ್ಟಕ್ಕೂ ಯಾರು ಈ ಪ್ರತಾಪ್ ಚಂದ್ರ ಸಾರಂಗಿ? ಅವರ ಕುರಿತಾದ ಸ್ವಾರಸ್ಯಕರ ಮಾಹಿತಿ ಇಲ್ಲಿದೆ ಓದಿಕೊಳ್ಳಿ.
ಎಪ್ಪತ್ತರ ಇಳಿ ವಯಸ್ಸಿನ ಪ್ರತಾಪ್ ಸಾರಂಗಿ ಒಡಿಶಾ ಮೂಲದ ಬಲಾಸೋರ್ ಕ್ಷೇತ್ರದ ಸಂಸದ. ಇಡೀ ರಾಜ್ಯದಾದ್ಯಂತ 'ಒಡಿಶಾ ಮೋದಿ' ಎಂದೇ ಖ್ಯಾತನಾಮರು. ಐಷಾರಾಮಿ ಬದುಕಿಗೆ ಹಾತೊರೆಯದೆ ಸರಳತೆಯಿಂದ ಬದುಕು ನಡೆಸುತ್ತಿರುವ ಅಪರೂಪದ ರಾಜಕಾರಣಿ. ಎರಡು ಬಾರಿ ಸಂಸದ ಮತ್ತು ಸಚಿವರಾಗಿರುವ ಇವರ ಒಟ್ಟು ಆಸ್ತಿ ಒಂದು ಮನೆ, ಒಂದು ಸೈಕಲ್ ಮತ್ತು ಒಂದು ಬ್ಯಾಗು! ಶ್ವೇತ ವರ್ಣದ ಜುಬ್ಬಾ ಇವರ ಸಾಮಾನ್ಯ ದಿರಿಸು. ಅವಿವಾಹಿತ. ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡ ಸಾರಂಗಿ ತಮ್ಮ ಇಡೀ ಬದುಕನ್ನು ಸಮಾಜ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ.
ಇವರ ಪಾಲಿಗೆ ದೇಶವೇ ಕುಟುಂಬ. ಸಂಸ್ಕೃತ ಪಂಡಿತರಾಗಿರುವ ಸಾರಂಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದು, ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿದ್ದ ಸಾರಂಗಿ ಬಡ ಸಂಸದರ ಪಟ್ಟಿಯಲ್ಲಿ ಸ್ಥಾನಪಡೆದಿದ್ದರು. ಈ ಹಿಂದೆ 2004 ಮತ್ತು 2009 ರಲ್ಲಿ ನೀಲಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರತಾಪ್ ಚಂದ್ರ ಸಾರಂಗಿ ಅಂತಹ ಸಾಚಾ ರಾಜಕಾರಣಿಗೆ ಬಿಜೆಪಿ ಸರ್ಕಾರವು 2019ರಲ್ಲಿ ಪಶುಪಾಲನಾ ಮೀನುಗಾರಿಕೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ ಖಾತೆಯನ್ನು ನೀಡಿ ಗೌರವಿಸಿತು. 2021ರಲ್ಲಿ ಕೇಂದ್ರ ಸಚಿವರೂ ಆದರು.
ಹಣವಿಲ್ಲದೆ ಚುನಾವಣೆಗೆ ಸ್ಪರ್ಧಿಸಿದ ಸಾರಂಗಿ
ಚುನಾವಣೆಗಾಗಿ ಕೋಟಿಗಟ್ಟಲೆ ಹಣ ಸುರಿಯುವ ರಾಜಕಾರಣಿಗಳ ಮಧ್ಯೆ, ಸೈಕಲ್ ಮತ್ತು ಕಾಲ್ನಡಿಗೆಯ ಮೂಲಕ ಪ್ರಚಾರ ಮಾಡಿದ ಸಾರಂಗಿ, ಹಣ ಮತ್ತು ಪ್ರಚಾರದ ಭರಾಟೆಯಿಲ್ಲದೆ ಚುನಾವಣೆಗಳಲ್ಲಿ ದಾಖಲೆಯ ಗೆಲುವು ಸಾಧಿಸಿದವರು. ಸಾಕಷ್ಟು ವರ್ಷಗಳ ಕಾಲ ತಳಮಟ್ಟದಿಂದ ಪಕ್ಷವನ್ನು ಕಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಕಷ್ಟಗಳಿಗೆ ನೆರವಾದವರು. ಅವರ ಹೃದಯವಂತಿಕೆ, ಸರಳತೆ ಮತ್ತು ಕಾಳಜಿಗೆ ಒಲಿದ ಮತದಾರರು ಅವರನ್ನು ಸಂಸತ್ತಿಗೆ ಕಳುಹಿಸಿದರು.
ಇನ್ನು ರಾಜಕೀಯದ ಜೊತೆಗೆ ಅಧ್ಯಾತ್ಮಿಕ ಮತ್ತು ಅಲೌಕಿಕ ಪಯಣದ ಬಗ್ಗೆ ಆಸಕ್ತಿ ಹೊಂದಿರುವ ಸಾರಂಗಿ ಬಿಡುವಿನ ವೇಳೆಯಲ್ಲಿ ಭಗವಂತನ ಸ್ಮರಣೆ, ಧ್ಯಾನದಲ್ಲಿ ಕಳೆಯುತ್ತಾರೆ. ಪ್ರಾಣಿ-ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದಾರೆ.
ಮಣ್ಣಿನ ಮನೆ ನಿರ್ಮಿಸಿದ ಸಾರಂಗಿ
ಸಂಸದರಾಗಿ ಆಯ್ಕೆಯಾದ ಕೆಲವು ವರ್ಷಗಳ ನಂತರ ಪ್ರತಾಪ್ ಚಂದ್ರ ಸಾರಂಗಿ ಹುಮಾಯೂನ್ ರಸ್ತೆ ಪಕ್ಕದ ನಗರದಲ್ಲಿ ಮಣ್ಣಿನ ಮನೆ ನಿರ್ಮಿಸಿದ್ದಾರೆ. ಮನೆಯ ನಿರ್ಮಾಣ ಶೈಲಿ, ವಿನ್ಯಾಸ ಹಾಗೂ ಸರಳವಾದ ಯೋಜನೆಗಳಿಂದ ಹೆಚ್ಚು ಸುದ್ದಿಯಾಗಿತ್ತು. ಮನೆಯಲ್ಲಿ ಒಂದು ಮಹಡಿ ಮತ್ತು ಎರಡು ಮಲಗುವ ಕೋಣೆಗಳಿವೆ. ನೋಡುವುದಕ್ಕೆ ಬಹಳ ಆಕರ್ಷಕವಾಗಿದ್ದು, ಮಣ್ಣಿನ ಗೋಡೆಗಳು , ಬಿದಿರಿನ ಛಾವಣಿಗಳು ಮತ್ತು ಗೋಡೆಗಳ ಮೇಲೆ ಮಣ್ಣಿನಿಂದಲೇ ಮಾಡಲಾದ ಕೆತ್ತನೆಗಳಿವೆ. ಮನೆಯ ಹಿಂದೆ ಮಣ್ಣಿನ ಮುಖಮಂಟಪ , ಹಸುವಿನ ಸಗಣಿ ಬಳಿದ ಗೋಡೆಗಳು , ಮನೆಯಲ್ಲಿ ತಯಾರಿಸಿದ ಮಂಚ ಹೀಗೆ ವಿಶಿಷ್ವವಾಗಿ ಮನೆಯನ್ನು ಕಟ್ಟಲಾಗಿದೆ. ಅಪ್ಪಟ ಗ್ರಾಮೀಣ ಸೊಗಡನ್ನು ಸಾರಂಗಿ ಅವರ ಮನೆ ಕಟ್ಟಿಕೊಡುತ್ತದೆ. ಆಡಂಬರದ ಬದುಕಿನಿಂದ ದೂರ ಉಳಿದು ಜನ ಸೇವೆಗಾಗಿಯೇ ತುಡಿಯುವ ಮತ್ತು ಮಿಡಿಯುವ ಪ್ರತಾಪ್ ಚಂದ್ರ ಸಾರಂಗಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.