ಪತ್ತನಂತಿಟ್ಟ: ಶಬರಿಮಲೆಯಲ್ಲಿ ಮಂಡಲ ಪೂಜಾ ಮಹೋತ್ಸವದ ದಿನ ಸಮೀಪಿಸುತ್ತಿರುವಂತೆ ಭಕ್ತಾದಿಗಳ ದಟ್ಟಣೆ ಹೆಚ್ಚಾಗತೊಡಗಿದೆ. ಗುರುವಾರ ಮಧ್ಯಾಹ್ನದಿಂದ ಆರಂಭಗೊಂಡಿರುವ ಭಕ್ತಾದಿಗಳ ದಟ್ಟಣೆ ಶುಕ್ರವಾರದ ವರೆಗೂ ಮುಂದುವರಿದಿತ್ತು. ಸಂಜೆ 7ಕ್ಕೆ ಪಂಪೆಯಿಂದ ಹೊರಟವರಿಗೆ ಶುಕ್ರವಾರ ಬೆಳಗ್ಗೆ 3ರ ನಂತರ ದರ್ಶನ ಲಭಿಸಿದೆ. ಕೆಲವು ಭಕ್ತಾದಿಗಳು ಹದಿನೆಂಟು ಮೆಟ್ಟಿಲ ಸನಿಹ ಸಮೀಪಿಸುತ್ತಿದ್ದಂತೆ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಿಕೊಂಡಿದ್ದು, ಮತ್ತೆ ಮರುದಿನ ಬೆಳಗ್ಗೆ 3ಕ್ಕೆ ಗರ್ಭಗುಡಿ ಬಾಗಿಲು ತೆರೆದ ನಂತರವಷ್ಟೆ ಹದಿನೆಂಟು ಮೆಟ್ಟಿಲೇರಿ ದರ್ಶನ ಪಡೆದಿದ್ದಾರೆ. ಭಕ್ತಾದಿಗಳು ಅಲ್ಲಿ ವರೆಗೂ ಕಾಲ್ನಡೆ ಚಪ್ಪರದಲ್ಲಿ ಸರತಿಸಾಲಲ್ಲೇ ನಿಲ್ಲಬೇಕಾಗುತ್ತಿದೆ.
ಈ ಮಧ್ಯೆ ಶಬರಿಮಲೆಯಲ್ಲಿ ನಿಗದಿಪಡಿಸಿರುವ ಆರು ದಿವಸಗಳಿಗಿಂತ ಹೆಚ್ಚುಕಾಲ ಯಾವೊಬ್ಬ ಭಕ್ತನೂ ವಾಸ್ತವ್ಯ ಹೂಡುವುದಿಲ್ಲ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಹೈಕೋರ್ಟು ನಿರ್ದೇಶಿಸಿದೆ. ಡೋನರ್ಸ್ ಕೊಠಡಿಗಳಲ್ಲಿ ಯಾರೂ ಆರು ದಿವಸಗಳಿಗಿಂತ ಹೆಚ್ಚುಕಾಲ ತಂಗುತ್ತಿಲ್ಲ ಎಂಬುದನ್ನೂ ಖಚಿತಪಡಿಸಿಕೊಳ್ಳುವಂತೆ ಜಸ್ಟಿಸ್ ಅನಿಲ್ ಕೆ. ನರೇಂದ್ರನ್, ಜಸ್ಟಿಸ್ ಪಿ.ಜಿ ಅರುಣ್‍ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ. ಕೆಲವರು ನಿಗದಿತ ಆರು ದಿವಸಗಳಿಗಿಂತ ಹೆಚ್ಚುಕಾಲ ಕೊಠಡಿ ಪಡೆದು ವಾಸ್ತವ್ಯ ಹೂಡುತ್ತಿರುವ ಬಗ್ಗೆ ಲಭಿಸಿದ ದೂರಿನನ್ವಯ ಈ ಆದೇಶ ಹೊರಡಿಸಲಾಗಿದೆ.