ತಿರುವನಂತಪುರಂ: ಜನವರಿ 4 ರಿಂದ 8 ರವರೆಗೆ ತಿರುವನಂತಪುರಂನ 25 ಸ್ಥಳಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಕೇರಳ ಶಾಲಾ ಕಲೋತ್ಸವದ ಕಾರ್ಯಕ್ರಮದ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಬಿಡುಗಡೆ ಮಾಡಿದರು.ಸ್ಪರ್ಧೆಯನ್ನು ನಿಗದಿತ ಸಮಯಕ್ಕೆ ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಸೂಚಿಸಿದರು.
ಮೂರನೇ ಬಾರಿ ಕರೆದರೂ ಬಾರದ ತಂಡಗಳ ಅನರ್ಹತೆ ಬಗ್ಗೆಯೂ ಪರಿಶೀಲನೆಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರೌಢಶಾಲಾ ವಿಭಾಗದಲ್ಲಿ 101, ಹೈಯರ್ ಸೆಕೆಂಡರಿ ವಿಭಾಗದಲ್ಲಿ 100, ಸಂಸ್ಕøತೋತ್ಸವದಲ್ಲಿ 19 ಹಾಗೂ ಅರೇಬಿಕ್ ಕಲೋತ್ಸವದಲ್ಲಿ 19 ಎಂಬಂತೆ ಒಟ್ಟು 249 ಸ್ಪರ್ಧೆಗಳು ನಡೆಯಲಿದ್ದು, ಇದರಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಕಲಾ ಪ್ರತಿಭೆಗಳು ಸ್ಪರ್ಧಿಸುತ್ತಿದ್ದಾರೆ. ನಗರದಲ್ಲಿ ಸುಮಾರು 30 ಶಾಲೆಗಳನ್ನು ವಸತಿ ಕೇಂದ್ರಗಳಾಗಿ ಆಯ್ಕೆ ಮಾಡಲಾಗಿದೆ. ಕಲೋತ್ಸವದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಈ ಬಾರಿಯ ಕಲೋತ್ಸವದಲ್ಲಿ ಐದು ಬುಡಕಟ್ಟು ನೃತ್ಯ ಪ್ರಕಾರಗಳು ಸ್ಪರ್ಧಿಸುತ್ತಿವೆ. ಹೊಸದಾಗಿ ಪರಿಚಯಿಸಲಾದ ಸ್ಥಳೀಯ ನೃತ್ಯ ಪ್ರಕಾರಗಳೆಂದರೆ ಮಂಗಳಂಕಳಿ, ಪನಿಯಾ ನೃತ್ಯ, ಪಳಿಯ ನೃತ್ಯ, ಮಲಪುಲಯ ನೃತ್ಯ ಮತ್ತು ಇರುಳ ನೃತ್ಯ.
ಡಿ.31ರಂದು ಕಾಸರಗೋಡು ಜಿಲ್ಲೆಯ ಕಾಞಂಗಾಡ್‍ನಿಂದ ಚಿನ್ನದ ಶೀಲ್ಡ್ ಮೆರವಣಿಗೆ ಆರಂಭಗೊಂಡು ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಜನವರಿ 3ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರ ಜಿಲ್ಲೆಯ ಗಡಿಭಾಗದ ತಟ್ಟತುಮಲದಲ್ಲಿ ಗಣ್ಯರ ಸಮ್ಮುಖದಲ್ಲಿ ಸ್ವಾಗತಿಸಲಾಗುವುದು.
ಕಾರ್ಯಕ್ರಮದ ವೇಳಾಪಟ್ಟಿಯ ಪ್ರಕಾರ, ತಿರುವನಂತಪುರಂ ನಗರದಲ್ಲಿ 25 ಸ್ಥಳಗಳಲ್ಲಿ ಕಲಾ ಸ್ಪರ್ಧೆಗಳು ನಡೆಯಲಿವೆ. ಸ್ಥಳಗಳಿಗೆ ಕೇರಳದ ನದಿಗಳ ಹೆಸರನ್ನು ಇರಿಸಲಾಗಿದೆ.
ಎಲ್ಲಾ ಮೈದಾನಗಳಲ್ಲಿ ಬೆಳಗ್ಗೆ 9.30ಕ್ಕೆ ಸ್ಪರ್ಧೆಗಳನ್ನು ಆರಂಭಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ವೇಳಾಪಟ್ಟಿಯನ್ನು ಒಟ್ಟು ಸ್ಪರ್ಧಾ ವಿಷಯಗಳ ಸಂಖ್ಯೆಯಿಂದ ವಿಂಗಡಿಸಲಾಗಿದೆ. ಮೇಲ್ಮನವಿಗಳು ಬಂದಂತೆ ವೇಳಾಪಟ್ಟಿ ಬದಲಾಗಬಹುದು.