ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಚರ್ಚೆಗೆ ಒತ್ತಾಯಿಸಿ ಪಂಜಾಬ್‌ನ ರೈತರು ಈ ವಾರ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದಾರೆ. ಭಾರತೀಯ ಕಿಸಾನ್ ಪರಿಷತ್(ಬಿಕೆಪಿ) ನೇತೃತ್ವದ ರೈತರ ಮೊದಲ ಗುಂಪು ಇಂದು ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಲಿರುವುದರಿಂದ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಮುಜಾಗ್ರತೆ ವಹಿಸಿದ್ದಾರೆ.
ಅಲ್ಲದೆ, ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ಸಲಹೆಗಳನ್ನು ನೀಡಿದ್ದಾರೆ.
ಪ್ರತಿಭಟನಾ ನಿರತ ರೈತರು ಮಧ್ಯಾಹ್ನ ನೋಯ್ಡಾದ ಮಹಾ ಮಾಯ ಮೇಲ್ಸೇತುವೆಯಿಂದ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುವ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿರುವ ವಿಡಿಯೊವನ್ನು ಎಎನ್‌ಐ ಟ್ವೀಟ್ ಮಾಡಿದೆ.
ರೈತರು, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನೇತೃತತ್ವದಲ್ಲಿ ಫೆಬ್ರುವರಿ 13ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ಅವರನ್ನು ನಿರ್ಬಂಧಿಸಿದೆ.
ಡಿಸೆಂಬರ್ 6ರಿಂದ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮೆರವಣಿಗೆ ನಡೆಯಲಿದ್ದು, ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.