ಸೂರ್ಯನ ಬೆಳಕು ಈ ಭೂಮಿಗೆ ಎಷ್ಟು ಮುಖ್ಯ ಎಂಬುದನ್ನು ನಾವು ತಿಳಿದಿದ್ದೇವೆ. ಸೂರ್ಯನ ಬೆಳಕು ಇಲ್ಲದಿದ್ದರೆ ಇಡೀ ಭೂಮಿ ಕತ್ತಲೆಯಲ್ಲಿ ಮುಳುಗಲಿದೆ. ಹಾಗೆ ಪ್ರಾಣಿ, ಪಕ್ಷಿ, ಗಿಡ, ಮರಗಳು ಕೂಡ ಇದರಿಂದ ಸಂಕಷ್ಟಕ್ಕೆ ಒಳಗಾಗುತ್ತವೆ. ಹಾಗೆ ಬೆಳಗಿನ ಸಮಯದಲ್ಲಿ ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ಹಲವು ರೀತಿ ಕೆಲಸ ಕಾರ್ಯಗಳನ್ನು ನಾವು ಮಾಡುತ್ತೇವೆ.
ಸೋಲಾರ್ ಎನರ್ಜಿ ಸೇರಿದಂತೆ ಹಲವು ಶಕ್ತಿ ಮೂಲವಾಗಿ ಸೂರ್ಯನ ಬೆಳಕು ಕೆಲಸ ಮಾಡುತ್ತೆ. ಆದ್ರೆ ಕತ್ತಲಾದ ಮೇಲೆ ಸೂರ್ಯನ ಬೆಳಕಿರದ ಕಾರಣ ಹಲವು ಕೆಲಸಗಳಿಗೆ ಬ್ರೇಕ್ ಬೀಳುತ್ತದೆ. ಆದ್ರೆ ಈಗೊಂದು ಸ್ಟಾರ್ಟ್ಅಪ್ ಒಂದು ರಾತ್ರಿ ಸಮಯದಲ್ಲಿ ಸೂರ್ಯನ ಬೆಳಕು ನೀಡಲು ಮುಂದಾಗಿದೆ. ಇದು ಕೇಳಲು ಎಷ್ಟು ವಿಲಕ್ಷಣವಾಗಿದೆಯೋ ಹಾಗೆ ಅಚ್ಚರಿಗೂ ಕಾರಣವಾಗುತ್ತೆ.
ರಾತ್ರಿ ಹೊತ್ತು ಸೂರ್ಯನ ಬೆಳಕು ಪಡೆಯುವುದೆ ಅಂದರೇನೆ ವಿಚಿತ್ರ ಎನಿಸಬಹುದು. ಆದ್ರೆ ಇಲ್ಲೊಂದು ಸಂಸ್ಥೆ ಇದನ್ನು ನಿಜ ಮಾಡಲು ಹೊರಟಿದೆ ಅದರಲ್ಲಿ ಬಹುತೇಕ ಯಶಸ್ವಿಯೂ ಆಗಿದೆ. ಹೌದು ಸ್ಯಾಟಲೈಟ್ ಸಹಾಯದಿಂದ ಕತ್ತಲೆ ಇರುವ ಜಾಗಕ್ಕೆ ಸೂರ್ಯನ ಬೆಳಕನ್ನು ಹರಿಸುವಂಯಹ ವಿಭಿನ್ನ ಪ್ರಯತ್ನವಿದು.
ಆಕಾಶದಲ್ಲಿ ದೊಡ್ಡ ದೊಡ್ಡ ಕನ್ನಡಿಗಳ ಇಟ್ಟು ಅದನ್ನು ಸೂರ್ಯನ ಕಡೆಗೆ ಮುಖ ಮಾಡಿ, ಬಳಕ ಕತ್ತಲು ಇರುವ ಜಾಗದ ಕಡೆಗೆ ಬೆಳಕನ್ನು ಪ್ರತಿಫಲಿಸುವಂತೆ ಮಾಡುವ ಕಾರ್ಯ ಇದಾಗಿದೆ. ಸಿಇಒ ಬೆನ್ ನೊವಾಕ್ ಸ್ಥಾಪಿಸಿದ ಸ್ಟಾರ್ಟಪ್ ರಾತ್ರಿ ಸಮಯದಲ್ಲಿ ಸೌರ ಫಲಕಗಳ ಮೇಲೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಉದ್ದೇಶ ಹೊಂದಿದೆ. ಬೇಡಿಕೆಯ ಆಧಾರದ ಮೇಲೆ ಸೂರ್ಯನ ಬೆಳಕನ್ನು ಮಾರಾಟ ಮಾಡಲು ಈ ಸಂಸ್ಥೆ ಉದ್ದೇಶಿಸಿದೆ.
ಇದೇ ವರ್ಷ ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ನಡೆದಿದ್ದ ಬಾಹ್ಯಾಕಾಶದಿಂದ ಶಕ್ತಿಯ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ನೋವಾಕ್ ಈ ಹೊಸ ಐಡಿಯಾವನ್ನು ಜನರ ಮುಂದಿಟ್ಟಿದ್ದರು. ಈ ಆಲೋಚನೆಗೆ ಜನರು ಕೂಡ ಫಿದಾ ಆಗಿದ್ದರು. ಆದ್ರೆ ಇದನ್ನು ಹೇಗೆ ಪರಿಪೂರ್ಣ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಕತ್ತಲಾದ ಮೇಲೆಯೂ ಸೋಲಾರ್ ಕೇಂದ್ರಗಳು ಕೆಲಸ ಮಾಡುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದರು.
ಹಾಗೆ ಆಕಾಶದಲ್ಲಿ ಸ್ಥಾಪಿಸಲು ದೊಡ್ಡ ದೊಡ್ಡ ಕನ್ನಡಿಗಳ ದೊಡ್ಡ ಸರಣಿಯನ್ನು ಹೊತ್ತೊಯ್ಯಲು ಸಂಸ್ಥೆ ಉಪಗ್ರಹಗಳ ಉಡಾವಣೆಗೆ ಯೋಜನೆ ರೂಪಿಸಿದೆ. ದೊಡ್ಡ ದೊಡ್ಡ ಕನ್ನಡಿಗಳ ಹೊಂದಿರುವ ಬರೋಬ್ಬರಿ 57 ಉಪಗ್ರಹಗಳನ್ನು ಉಡಾವಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆಯಂತೆ. ಪ್ರತಿಯೊಂದೂ 33-ಚದರ-ಅಡಿ ಅಲ್ಟ್ರಾ-ರಿಫ್ಲೆಕ್ಟಿವ್ ಮೈಲಾರ್ ಕನ್ನಡಿಗಳಿಂದ ತುಂಬಿದೆ. ಇದು ಬಹುದೊಡ್ಡ ಸೌರ ಫಾರ್ಮ್‌ಗಳ ಮೇಲೆ ಬೆಳಕು ಹರಿಸಲಿದೆ.
ಇದು ವಿದ್ಯುತ್ ಕೊರತೆ ದೊಡ್ಡ ದೊಡ್ಡ ಉತ್ಪಾದನಾ ವಲಯಗಳಿಗೆ ವರದಾನವಾಗಲಿದೆಯಂತೆ. ಈಗಾಗಲೇ ಈ ವಿಭಿನ್ನ ಪರಿಕ್ಷಾರ್ಥ ಉಡಾವಣೆಗಳು ಹಾಗೂ ಸೂರ್ಯನ ಬೆಳಕು ಭೂಮಿ ಮೇಲೆ ನಿಗದಿತ ಸ್ಥಳದಲ್ಲಿ ಬೀಳುವಂತೆ ಮಾಡುವ ಸಾಫ್ಟ್‌ವೇರ್‌ಗಳ ಅಭಿವೃದ್ಧಿ ಪಡಿಸಲಾಗಿದೆ. ಹಾಗೆ ಯಾವ ಜಾಗದ ಮೇಲೆ ಸೂರ್ಯನ ಬೆಳಕು ಮೂಡಿಸಬೇಕು ಎಂಬುದನ್ನು ಕೂಡ ನಿರ್ಧರಿಸಿದಂತೆ ಮಾಡುವ ಪ್ರಯೋಗ ಕೂಡ ಯಶಸ್ವಿಯಾಗಿ ಪೂರೈಸಲಾಗಿದೆ.
2025 ರಲ್ಲಿ ಸಂಸ್ಥೆ ಈ ಪ್ರಯೋಗವನ್ನು ಜಾಗತಿಕ ಮಟ್ಟದಲ್ಲಿ ಜಾರಿ ಮಾಡಲು ನಿರ್ಧರಿಸಿದೆ. ಅಗತ್ಯವಿರುವ ಸೌರ ಶಕ್ತಿಯನ್ನು ರಾತ್ರಿಯ ಸಮಯದಲ್ಲೂ ನೀಡುವುದು ಇದರಿಂದ ವಿದ್ಯುತ್ ಕೊರತೆಗೆ ಮುಕ್ತಿ ನೀಡುವ ಕಾರ್ಯ ಮಾಡಲಿದೆಯಂತೆ. ಈಗಾಗಲೇ ಸೂರ್ಯನ ಬೆಳಕನ್ನು ಖರೀದಿಸಲು ಸುಮಾರು 30 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆಯಂತೆ.