ಉಪ್ಪಳ :ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಉಪ್ಪಳ ನಿವಾಸಿ ಅಬ್ದುಲ್ ರಾವುಫ್ ಅಲಿಯಾಸ್ ಮೀಶ ರಾವುಫ್‍ನನ್ನು ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಮೊಗ್ರಾಲಿನ ಕ್ವಾಟ್ರಸ್ ಒಂದರಿಂದ ಬಂಧಿಸಿದೆ. ಈತ ಸಂಚಾರಕ್ಕೆ ಬಳಸಿದ್ದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಉಪ್ಪಳದಿಂದ ಇತ್ತೀಚೆಗೆ ಕಳವುಗೈದಿರುವುದಾಗಿ ಪತ್ತೆಹಚ್ಚಲಾಗಿದೆ.
ಕಾಸರಗೋಡು, ಕುಂಬಳೆ, ವಿದ್ಯಾನಗರ, ಮಂಜೇಶ್ವರ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಕೇಸುಗಳು ದಾಖಲಾಗಿದ್ದು, ಈತ ಮಹಾರಾಷ್ಟ್ರ, ದೆಹಲಿ, ಕರ್ನಾಟಕದ ವಿವಿಧೆಡೆ ಹಲವು ವರ್ಷಗಳಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದನು. ಈತನ ವಿರುದ್ಧ ಹಲವು ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈತನ ಮೇಲೆ ನಿಗಾಯಿರಿಸಿದ್ದರು.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗಬಂಧನ ವಿಧಿಸಿದೆ.