ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ಭಾರತ ಮೂಲದ ಹರ್ಮಿತ್ ಕೆ. ಧಿಲ್ಲೋನ್ ಅವರನ್ನು ನೇಮಿಸಿದ್ದಾರೆ.
'ಹರ್ಮಿತ್ ಕೆ. ಧಿಲ್ಲೋನ್ ಅವರನ್ನು ನ್ಯಾಯಾಂಗ ಇಲಾಖೆಯ ಸಹಾಯಕ ಅಟಾರ್ನಿ ಜನರಲ್ ಆಗಿ ನೇಮಿಸಿದ್ದೇನೆ' ಎಂದು ಸಾಮಾಜಿಕ ಜಾಲತಾಣ 'ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಖ್ ಸಮುದಾಯದ ಧಿಲ್ಲೋನ್ ಅವರು ಡಾರ್ಟ್‌ಮೌತ್ ಕಾಲೇಜಿನಿಂದ ಪದವಿ, ವರ್ಜಿನಿಯಾ ಲಾ ಸ್ಕೂಲ್‌ನಿಂದ ಕಾನೂನು ಪದವಿ ಪಡೆದಿದ್ದಾರೆ. ಅಮೆರಿಕದ ನಾಲ್ಕನೇ ಸರ್ಕೀಟ್ ನ್ಯಾಯಾಲಯದಲ್ಲಿ ನ್ಯಾಯಿಕ ಅಧಿಕಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
ತಮ್ಮ ವೃತ್ತಿ ಜೀವನದ ಉದ್ದಕ್ಕೂ ಧಿಲ್ಲೋನ್ ಅವರು ನಾಗರಿಕ ಹಕ್ಕುಗಳ ರಕ್ಷಣೆ, ವಾಕ್ ಸ್ವಾತಂತ್ರ್ಯ, ಉದ್ಯೋಗದ ಸ್ಥಳದಲ್ಲಿ ತಾರತಮ್ಯ ನಿವಾರಣೆಗಾಗಿ ಹೋರಾಟ ನಡೆಸಿದ್ದರು.
ಚಂಡೀಗಢದಲ್ಲಿ ಜನಿಸಿದ ಧಿಲ್ಲೋನ್ ಅವರು ಬಾಲ್ಯದಲ್ಲೇ ಹೆತ್ತವರ ಜೊತೆ ಅಮೆರಿಕಕ್ಕೆ ಹೋಗಿ, ಅಲ್ಲಿಯೇ ನೆಲೆಸಿದ್ದಾರೆ. 2016ರಲ್ಲಿ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದ ವೇಳೆ ವೇದಿಕೆ ಹತ್ತಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದರು.