ನವದೆಹಲಿ: ಬ್ಯಾಂಕ್ ಖಾತೆ ಹೊಂದಿರುವವರು ನಾಲ್ವರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುವುದು ಸೇರಿದಂತೆ ಹಲವು ಅಂಶಗಳನ್ನು ಹೊಂದಿರುವ ಬ್ಯಾಂಕಿಂಗ್ ಕಾಯ್ದೆಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಕಳೆದ ಆರು ದಶಕದಿಂದಲೂ ಕಂಪನಿಗಳ ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ಹೆಚ್ಚಿಸಿರಲಿಲ್ಲ. ಮಿತಿಯನ್ನು ಹೆಚ್ಚಳ ಮಾಡುವ ಅವಕಾಶವನ್ನು ಹಾಗೂ 'ಸಬ್ಸ್ಟಾನ್ಷಿಯಲ್ ಇಂಟರೆಸ್ಟ್' ಅನ್ನು ಮರುವ್ಯಾಖ್ಯಾನ ಮಾಡುವ ಪ್ರಸ್ತಾವವನ್ನು ಮಸೂದೆ ಒಳಗೊಂಡಿದೆ.
ಯಾವುದೇ ಕಂಪನಿಯಲ್ಲಿ ನಿರ್ದೇಶಕರು ₹5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದರೆ ಅದನ್ನು 'ಸಬ್ಸ್ಟಾನ್ಷಿಯಲ್ ಇಂಟರೆಸ್ಟ್' ಎಂದು ನಿರ್ಧರಿಸಲಾಗುತ್ತದೆ. ಅಂತಹ ನಿರ್ದೇಶಕರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಪಡೆಯುವುದು ಕಡ್ಡಾಯ.
ಪ್ರಸ್ತಾವಿತ ತಿದ್ದುಪಡಿಯು, ನಿರ್ದೇಶಕರು ₹2 ಕೋಟಿ ಮೊತ್ತದ ಷೇರುಗಳ ಒಡೆತನ ಅಥವಾ ಮಾಲೀಕತ್ವ ಹೊಂದಲು ಅವಕಾಶ ನೀಡುತ್ತದೆ.
ನಾಮನಿರ್ದೇಶನ ವಿಚಾರವಾಗಿ ನಡೆದ ಚರ್ಚೆ ವೇಳೆ ಉತ್ತರಿಸಿದ ಸಚಿವ ನಿರ್ಮಲಾ ಸೀತಾರಾಮನ್, 'ಠೇವಣಿದಾರರು ಒಬ್ಬರ ನಂತರ ಮತ್ತೊಬ್ಬರಂತೆ ನಾಲ್ವರನ್ನು ನಾಮನಿರ್ದೇಶನ ಮಾಡಬಹುದು ಇಲ್ಲವೇ ಒಟ್ಟಿಗೇ ಈ ಪ್ರಕ್ರಿಯೆ ಪೂರ್ಣಗೊಳಿಸುವ ಸೌಲಭ್ಯ ಇರಲಿದೆ' ಎಂದರು.
'ಲಾಕರ್ ಹೊಂದಿರುವವರು, ಒಂದು ಬಾರಿ ಮಾತ್ರ ನಾಮನಿರ್ದೇಶನ ಮಾಡಬಹುದಾಗಿದೆ' ಎಂದೂ ಹೇಳಿದರು.
'ನಮ್ಮ ಬ್ಯಾಂಕುಗಳು ಸುರಕ್ಷಿತವಾಗಿರಬೇಕು, ಸ್ಥಿರತೆ ಹೊಂದಿರಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆದಿತ್ತು. ಈ ನಿಟ್ಟಿನಲ್ಲಿ ನಡೆದ ಕಾರ್ಯಕ್ಕೆ 10 ವರ್ಷಗಳ ಬಳಿಕ ಫಲ ಸಿಗುತ್ತಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ (ಅಧ್ಯಕ್ಷ ಮತ್ತು ಪೂರ್ಣಕಾಲಿಕ ನಿರ್ದೇಶಕರನ್ನು ಹೊರತುಪಡಿಸಿ) ಅಧಿಕಾರದ ಅವಧಿಯು ಪ್ರಸ್ತುತ 8 ವರ್ಷ ಇದೆ. ಈ ಅವಧಿಯನ್ನು 10 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಈ ಮಸೂದೆ ಒಳಗೊಂಡಿದೆ.
ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರು, ರಾಜ್ಯ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವುದು ಸೇರಿದಂತೆ ಹಲವಾರು ಅಂಶಗಳನ್ನು ತಿದ್ದುಪಡಿ ಮಸೂದೆ ಒಳಗೊಂಡಿದೆ.
ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಪ್ರಸ್ತಾವಿತ ತಿದ್ದುಪಡಿಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಲತುಂಬಲಿವೆ. ಗ್ರಾಹಕರಿಗೆ ಹೆಚ್ಚು ಅನುಕೂಲ ಹಾಗೂ ಹೂಡಿಕೆದಾರರ ರಕ್ಷಣೆಗೆ ಒತ್ತು ನೀಡಿವೆ.