ಸೋಲ್: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು 'ಸೇನಾಡಳಿತ ಜಾರಿ' ಆದೇಶವನ್ನು ಹಿಂಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೇನಾಡಳಿತ ಜಾರಿ ಆದೇಶದಿಂದ ಮತ್ತಷ್ಟು ರಾಜಕೀಯ ಬಿಕ್ಕಟ್ಟು ಎದುರಾಗಲಿದೆ. ತಕ್ಷಣ ಈ ಆದೇಶವನ್ನು ಹಿಂಪಡೆಯುವಂತೆ ಸಂಪುಟ ಸಚಿವರು ಯೂನ್ ಸುಕ್ ಯೋಲ್ ಮೇಲೆ ಒತ್ತಡ ಹೇರಿದ್ದರು.
ಇದೀಗ ಯೋಲ್ ಅವರು ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ತಿಳಿದುಬಂದಿದೆ.
ದೇಶದ ವಿರೋಧ ಪಕ್ಷಗಳು ಸಂಸತ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿರುವ ಸುಕ್ ಯೋಲ್ ಅವರು ದೇಶದಲ್ಲಿ ಮಂಗಳವಾರದಿಂದಲೇ 'ತುರ್ತು ಸೇನಾ ಆಡಳಿತ'ವನ್ನು ಜಾರಿಗೊಳಿಸಿದ್ದರು.
'ದೇಶ ವಿರೋಧಿ ಕೃತ್ಯದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಉತ್ತರ ಕೊರಿಯಾ ಯತ್ನಿಸುತ್ತಿದೆ' ಎಂದು ಸುಕ್ ಯೋಲ್ ಆರೋಪಿಸಿದ್ದರು.
'ದೇಶದ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರ ಸ್ಥಿತಿ ತಲುಪಿರುವುದರಿಂದ ಸಾಂವಿಧಾನಿಕ ಆದೇಶವನ್ನು ಪ್ರಕಟಿಸಲಾಗಿದೆ' ಎಂದು ದೇಶವನ್ನು ಉದ್ದೇಶಿಸಿ ಟೆಲಿವಿಷನ್ ಮೂಲಕ ಅವರು ತಿಳಿಸಿದ್ದರು.
1980ರ ದಶಕದ ಉತ್ತರಾರ್ಧದಲ್ಲಿ ದೇಶದಲ್ಲಿ ಮಿಲಿಟರಿ ಸರ್ವಾಧಿಕಾರವು ಕೊನೆಗೊಂಡ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷರು ಇದೇ ಮೊದಲ ಬಾರಿಗೆ 'ಸೇನಾಡಳಿತ ಜಾರಿ' ಆದೇಶ ಹೊರಡಿಸಿದ್ದರು.