ಮುಂಬೈ: ದಾದರ್ ರೈಲು ನಿಲ್ದಾಣದ ವಿಸ್ತರಣೆಗಾಗಿ ಭಗವಾನ್ ಹನುಮಾನ್ ದೇಗುಲವನ್ನು ಉರುಳಿಸಲು ಹೊರಡಿಸಿದ್ದ ಆದೇಶವು ರಾಜಕೀಯ ವಾಕ್ಸಮರಕ್ಕೆ ಎಡೆಮಾಡಿಕೊಡುತ್ತಿದ್ದಂತೆ, ಕೇಂದ್ರ ರೈಲ್ವೆಯು ತನ್ನ ಆದೇಶವನ್ನು ಹಿಂಪಡೆದಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ದಾದರ್‌ನ ಪೂರ್ವ ಭಾಗದಲ್ಲಿ ಹನುಮಾನ್ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ವರ್ಷಗಳು ಉರುಳಿದಂತೆ ಈ ಜಾಗದಲ್ಲೇ ದೇಗುಲ ನಿರ್ಮಾಣಗೊಂಡಿದೆ. ಇದರ ಪಕ್ಕದಲ್ಲೇ ಸಾಯಿಬಾಬಾ ಮಂದಿರವು ನಿರ್ಮಾಣವಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು (ಯುಬಿಟಿ) ದೇಗುಲ ಉರುಳಿಸುವ ಆದೇಶವನ್ನು ವಿರೋಧಿಸಿದ್ದರೆ, ಈ ಕುರಿತಂತೆ 'ರೈಲ್ವೆ ಸಚಿವಾಲಯದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಬಿಜೆಪಿ ಹಾಗೂ ಶಿವಸೇನೆಯ ಮುಖಂಡರು ದೇಗುಲಕ್ಕೆ ಭೇಟಿ ನೀಡುತ್ತಿರುವುದು ಸ್ಥಳದಲ್ಲಿ ಉದ್ವಿಗ್ನ ಸ್ಥಿತಿಯನ್ನು ನಿರ್ಮಿಸಿದೆ.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಪದಾಧಿಕಾರಿಗಳೊಂದಿಗೆ ಕೇಂದ್ರ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಬಿಜೆಪಿ ಶಾಸಕ ಲೋಧಾ, 'ಈ ವಿಷಯವನ್ನು ಬಗೆಹರಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಟ್ಟಿಗೆ ಮಾತನಾಡಿದ್ದೇವೆ. ನಮ್ಮ ಪ್ರಯತ್ನ ಯಶಸ್ವಿಯಾಗಿದೆ. ದೇಗುಲ ಉರುಳಿಸುವ ಆದೇಶವು ರದ್ದುಗೊಳ್ಳಲಿದೆ' ಎಂದರು.
'ದೇಗುಲವನ್ನು ಉರುಳಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳೇ ಸ್ಪಷ್ಟನೆ ನೀಡಲಿದ್ದಾರೆ' ಎಂದು ಮಾಜಿ ಸಂಸದ ಕಿರೀಟ್ ಸೋಮಯ್ಯ ಹೇಳಿದರು.
'ಶಾಸಕರಾದ ಆಶೀಶ್ ಶೆಲಾರ್, ಅಂಗಲ್ ಪ್ರಭಾತ್ ಲೋಧಾ ಅವರು ಕೇಂದ್ರ ರೈಲ್ವೆ ಅಧಿಕಾರಿಗಳ ತಂಡವನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರೈಲ್ವೆ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ದೇಗುಲ ಉರುಳಿಸುವ ಆದೇಶವನ್ನು ಹಿಂಪಡೆಯುವಂತೆ ಕೋರಿದರು. ಸಚಿವರ ಸೂಚನೆಯಂತೆ ನೋಟಿಸ್ ನೀಡುವುದನ್ನು ತಡೆಹಿಡಿದಿದ್ದೇವೆ' ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯು ತಿಳಿಸಿದೆ.
ಬಿಜೆಪಿಯ ಬೂಟಾಟಿಕೆ ಬಹಿರಂಗ: ಆದಿತ್ಯ ಠಾಕ್ರೆ
ಶಿವಸೇನೆಯ (ಯುಬಿಟಿ) ಯುವ ನಾಯಕ ವರ್ಲಿ ಶಾಸಕ ಆದಿತ್ಯ ಠಾಕ್ರೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 'ಹಿಂದುತ್ವದ ಹೆಸರಿನಲ್ಲಿ ಮತ ಪಡೆದ ಬಿಜೆಪಿಯ ಬೂಟಾಟಿಕೆಯು ಬಹಿರಂಗಗೊಂಡಿದೆ. ರೈಲ್ವೆ ಸಚಿವಾಲಯದ ಮೂಲಕ ದೇಗುಲಗಳನ್ನು ಉರುಳಿಸಲು ಫತ್ವಾ ಹೊರಡಿಸುತ್ತಿದೆ' ಎಂದು ಕಿಡಿಕಾರಿದರು. ಉದ್ಧವ್ ಠಾಕ್ರೆ ಸಹ ಇದಕ್ಕೂ ಮುನ್ನ ಇದೇ ವಿಷಯದಲ್ಲಿ ಕಮಲ ಪಾಳಯದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಲಬಾರ್ ಹಿಲ್‌ನ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ದೇಗುಲಕ್ಕೆ ಭೇಟಿ ನೀಡಿ ಆರತಿ ಮಾಡಿದರು. ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಶಾಸಕ ಆಶೀಶ್ ಶೆಲಾರ್ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.