ಸೋಲ್: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದೇಶದ ಮೇಲೆ ಮಿಲಿಟರಿ ಆಡಳಿತವನ್ನು ಹೇರಿದ್ದಕ್ಕಾಗಿ, ಅವರ ವಾಗ್ದಂಡನೆ ಕೋರಿ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತ್ತೊಮ್ಮೆ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿವೆ.
ಈ ಸಂಬಂಧ, ಡೆಮಾಕ್ರಟಿಕ್ ಪಕ್ಷದ ನೇತೃತ್ವದಲ್ಲಿ 6 ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಗೆ ಗುರುವಾರ ಈ ಕುರಿತ ನೋಟಿಸ್ ಸಲ್ಲಿಸಿವೆ.
ಅಧ್ಯಕ್ಷರಿಗೆ ವಾಗ್ದಂಡನೆ ವಿಧಿಸಬೇಕೆಂಬ ಈ ನಿರ್ಣಯವನ್ನು, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶನಿವಾರ ಮತಕ್ಕೆ ಹಾಕಲು ಉದ್ದೇಶಿಸಿರುವುದಾಗಿ ವಿರೋಧ ಪಕ್ಷಗಳು ತಿಳಿಸಿವೆ. ಇದಕ್ಕೂ ಮೊದಲು, ಯೋಲ್ ಅವರ ವಾಗ್ದಂಡನೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಕಳೆದ ಶನಿವಾರ ಮಂಡಿಸಿದ್ದ ಗೊತ್ತುವಳಿ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿತ್ತು.
ದೇಶದ ವಿರೋಧ ಪಕ್ಷಗಳು ಸಂಸತ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಡಿ.3ರಂದು 'ತುರ್ತು ಸೇನಾ ಆಡಳಿತ'ವನ್ನು ಜಾರಿಗೊಳಿಸಿದ್ದರು. ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ, ಡಿ.4ರಂದು ತಮ್ಮ ನಿರ್ಧಾರವನ್ನು ವಾಪಸು ಪಡೆದಿದ್ದರು.
ಅಧ್ಯಕ್ಷರ ಸಮರ್ಥನೆ: ದೇಶದಲ್ಲಿ ತಾವು ಮಿಲಿಟರಿ ಆಡಳಿತ ಹೇರಿದ್ದ ಕ್ರಮವನ್ನು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಗುರುವಾರ ಸಮರ್ಥಿಸಿಕೊಂಡಿದ್ದಾರೆ. ಮಿಲಿಟರಿ ಆಡಳಿತ ಜಾರಿ ಕ್ರಮವು, ಸರ್ಕಾರದ ಆಡಳಿತದ ಭಾಗವೇ ಆಗಿದೆ ಎಂದು ಹೇಳಿದ್ದಾರೆ. ತಮ್ಮ ವಾಗ್ದಂಡನೆಗೆ ಕೋರಿ ವಿಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತ್ತೊಮ್ಮೆ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊನೆವರೆಗೂ ಹೋರಾಡುವುದಾಗಿ ಹೇಳಿದ್ದಾರೆ.