ಕಾಸರಗೋಡು: ನಗರಸಭಾ ವ್ಯಾಪ್ತಿಯ ರಸ್ತೆಗಳು ಅತ್ಯಂತ ಶೋಚನೀಯಾವಸ್ಥೆಯಲ್ಲಿದ್ದು, ದುರಸ್ತಿಕಾರ್ಯಕ್ಕೆ ಮುಂದಾಗದ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯ ಧೋರಣೆ ವಿರುದ್ಧ ಚಾಲಕರು ರಂಗಕ್ಕಿಳಿದಿದ್ದಾರೆ.
ಅಲ್ಲಲ್ಲಿ ಹೊಂಡಗಳೆದ್ದು, ಆಟೋರಿಕ್ಷಾ, ದ್ವಿಚಕ್ರ ವಾಹನಗಳಿಗೆ ಸಂಚರಿಸಲಾಗದ ಸ್ಥಿತಿ ಎದುರಾಗಿದೆ. ಬಹುತೇಕ ಕಡೆ ರಸ್ತೆ ಮಧ್ಯೆ ಬಾಯ್ದೆರೆದುಕೊಂಡಿರುವ ಚರಂಡಿ, ಇನ್ನೊಂದೆಡೆ ಡಾಂಬರು ಕಿತ್ತು ಉಂಟಾಗಿರುವ ಹೊಂಡಗಳು ಚಾಲಕರ ಪಾಲಿಗೆ ಮರಣಗುಂಡಿಗಳಾಗಿ ಪರಿಣಮಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆಯನ್ವಯ ಅಭಿವೃದ್ಧಿಕಾರ್ಯ ನಡೆಯುತ್ತಿದ್ದು, ನಗರಸಭಾ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾಹನ ಸಂಚಾರವೂ ದುಸ್ತರವಾಗಿದೆ. ಹೊಸ ಬಸ್ ನಿಲ್ದಾಣ ಆಸುಪಾಸು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದದರಿಂದ ವಾಹನಸಂಚಾರ ಮತ್ತಷ್ಟು ಕ್ಲಿಷ್ಟದಾಯಕವಾಗಿದೆ. ಎಂಜಿ ರಸ್ತೆ, ಕರಮದಕ್ಕಾಡು, ಕೆಪಿಆರ್ ರಾವ್ ರಸ್ತೆ, ಮಧೂರು ರಸ್ತೆ, ಅಮೈ ರಸ್ತೆ ಸೇರಿದಂತೆ ನಗರಸಭಾ ವ್ಯಾಫ್ತಿಯ ಬಹುತೇಕ ಮಾರ್ಗಗಳು ಹೊಂಡಮಯವಾಗಿದೆ. ಮಳೆಗಾಲದಲ್ಲಿ ದುರಸ್ತಿಕಾರ್ಯಗಳಿಗೆ ಮಳೆ ಅಡ್ಡಿಯಾಗುತ್ತಿರುವುದಾಗಿ ನೆಪವೊಡ್ಡಿದ್ದ ಅಧಿಕಾರಿಗಳು, ಮಳೆ ದೂರಾಗಿ ತಿಂಗಳು ಸಮೀಪಿಸುತ್ತಿದ್ದರೂ, ದುರಸ್ತಿಕಾರ್ಯ ನಡೆಸದೆ ಪ್ರಯಾಣಿಕರು ಹಾಗೂ ಚಾಲಕರ ತಾಳ್ಮೆ ಪರೀಕ್ಷೆ ನಡೆಸುತ್ತಿದ್ದಾರೆ.
ರಸ್ತೆ ಶಿಥಿಲಾವಸ್ಥೆಯಿಂದ ನಗರ ಪ್ರದೇಶದ ಆಟೋಚಾಲಕರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಥಿಲ ರಸ್ತೆಗಳಿಂದಾಗಿ ಯಾವುದೇ ರಸ್ತೆಯಲ್ಲೂ ಬಾಡಿಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಾಡಿಗೆ ತೆರಳಿ ದರವಸೂಲಿ ಸಂದರ್ಭ ಪ್ರಯಾಣಿಕರಿಂದ ಬೈಗಳು ತನ್ನಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಚಾಲಕರು ಅಳಲು ವ್ಯಕ್ತಪಡಿಸುತ್ತಾರೆ.
ಹೆದ್ದಾರಿಯಲ್ಲಿ ಅಭಿವೃದ್ಧಿಕಾಮಗಾರಿ ನಡೆಯುವ ಕಾರಣ ಶಿಥಿಲಾವಸ್ಥೆ ಮುಂದುವರಿಯುತ್ತಿದ್ದರೆ, ನಗರಸಭಾ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ರಸ್ತೆ ಹಾಳಾಗುತ್ತಿದೆ. ಸಕಾಲಿಕವಾಗಿ ದುರಸ್ತಿಕಾರ್ಯ ಕೈಗೆತ್ತಿಕೊಂಡಲ್ಲಿ ರಸ್ತೆ ಹೆಚ್ಚು ಹಾಳಾಗುವುದನ್ನು ತಡೆಗಟ್ಟಬಹುದಾಗಿದ್ದರೂ, ರಸ್ತೆ ಪೂರ್ತಿ ಶಿಥಿಲಗೊಳ್ಳುವ ವರೆಗೂ ಸುಮ್ಮನಿರುವ ಇಲಾಖೆ ನಂತರ ಭಾರೀ ವೆಚ್ಚದೊಂದಿಗೆ ಕಾಮಗಾರಿ ಕೈಗೊಳ್ಳುತ್ತಿರುವುದು ಖಜಾನೆಗೂ ನಷ್ಟವುಂಟಾಗುತ್ತಿದೆ.
ಪ್ರತಿಭಟನೆಗೆ ನಿರ್ಧಾರ:
ನಗರಪ್ರದೇಶದ ಶೀಥಿಲಾವಸ್ಥೆಯಲ್ಲಿರುವ ರಸ್ತೆಯನ್ನು ದುರಸ್ತಿ ನಡೆಸುವಂತೆ ಆಟೋ ಚಾಲಕರ ಸಂಘಟನೆ ಎನ್. ಟಿ. ಯು. ಸಿ. ಆಗ್ರಹಿಸಿದೆ. ಕಾಸರಗೋಡು ನಗರ ಹಾಗೂ ಸುತ್ತಮುತ್ತಲಿನ ಬಹುತೇಕ ರಸ್ತೆಗಳು ವಾಹನಸಂಚಾರಕ್ಕೆ ಅಯೋಗ್ಯವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಡಿ. 21ರಂದು ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ನಡೆಸಲು ಸಂಘಟನೆ ತೀರ್ಮಾನಿಸಿದೆ.