ನವದೆಹಲಿ: 'ಜೀವನಾಂಶದ ಹಕ್ಕು ಎನ್ನುವುದು ಮೂಲಭೂತ ಹಕ್ಕುಗಳಿಗೆ ಸಮನಾಗಿದೆ. ಸಂವಿಧಾನದ 21ನೇ ವಿಧಿಯಲ್ಲಿ ಹೇಳಿರುವಂತೆ ಎಲ್ಲರಿಗೂ ಗೌರಯುತವಾಗಿ ಜೀವಿಸುವ ಹಕ್ಕಿದೆ' ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ. 'ನಾನು ಡೈಮಂಡ್ ಉದ್ಯಮದಲ್ಲಿ ತೊಡಗಿಕೊಂಡಿದ್ದು, ನಷ್ಟ ಅನುಭವಿಸಿದ್ದೇನೆ.
ಸಾಲ ವಸೂಲಿ ಪ್ರಕ್ರಿಯೆಯೂ ನಡೆದಿದೆ. ಆದ್ದರಿಂದ ಗುಜರಾತ್ ಹೈಕೋರ್ಟ್ ಆದೇಶಿಸಿದಷ್ಟು ದೊಡ್ಡ ಮೊತ್ತದ ಜೀವನಾಂಶ ನೀಡಲು ಸಾಧ್ಯವಿಲ್ಲ' ಎಂದು ಮೇಲ್ಮನವಿ ಸಲ್ಲಿಸಿದ್ದ ಪತಿಯ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ನಡೆಸಿದರು.
'2002ರ ಸರ್ಫೇಸಿ ಕಾಯ್ದೆ, 2016ರ ದಿವಾಳಿ ಸಂಹಿತೆ ಅಥವಾ ಇಂಥ ಯಾವುದೇ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಸಾಲದಾತರ ಹಕ್ಕುಗಳಿಗಿಂತಲೂ ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ನೀಡುವುದು ಹೆಚ್ಚು ಮುಖ್ಯವಾಗುತ್ತದೆ. ಯಾಕೆಂದರೆ, ಜೀವನಾಂಶದ ಹಕ್ಕು ಮೂಲಭೂತ ಹಕ್ಕುಗಳಿಗೆ ಸಮನಾಗಿದೆ' ಎಂದು ಪೀಠ ಹೇಳಿದೆ.
'ನನ್ನ ಆದಾಯ ತೆರಿಗೆ ರಿಟರ್ನ್ಸ್ ಸೇರಿದಂತೆ ಪತ್ನಿ ಸಲ್ಲಿಸಿರುವ ಇತರೆ ದಾಖಲೆಗಳು ಸರಿಯಿಲ್ಲ. ಆಕೆಯೂ ಉದ್ಯೋಗ ಮಾಡುತ್ತಿದ್ದಾಳೆ. ಆಕೆಗೆ ಜೀವನಾಂಶದ ಅಗತ್ಯವಿಲ್ಲ' ಎಂದೂ ಪತಿಯು ತನ್ನ ಅರ್ಜಿಯಲ್ಲಿ ವಾದಿಸಿದ್ದರು.
'ನಿಮ್ಮ ಪತಿಯ ಆಸ್ತಿಯ ಕುರಿತು ನೀವು ಹೊಸ ಸಾಕ್ಷ್ಯಗಳನ್ನು ಸಲ್ಲಿಸಿದರೆ, ನಿಮ್ಮ ಜೀವನಾಂಶದ ಮೊತ್ತದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಭಾರತೀಯ ದಂಡ ಸಂಹಿತೆಯ 127ನೇ ಸೆಕ್ಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು' ಎಂದೂ ಪೀಠ ಹೇಳಿದೆ.