ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರದ ಹಂಚಿಕೆಯು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.
ದೆಹಲಿಯಲ್ಲಿರುವ ಪಿಟಿಐ ಸುದ್ದಿ ಸಂಸ್ಥೆಯ ಕಚೇರಿಯಲ್ಲಿ ಸಂದರ್ಶನ ನೀಡಿ ಮಾತನಾಡಿರುವ ಅಬ್ದುಲ್ಲಾ, 'ಕೇಂದ್ರ ಸರ್ಕಾರವು ಈ ಹಿಂದೆ ತಾನು ಭರವಸೆ ನೀಡಿದಂತೆ ಶೀಘ್ರವೇ ಜಮ್ಮು ಕಾಶ್ಮೀರದಲ್ಲಿ 'ರಾಜ್ಯತ್ವ'ವನ್ನು ಮರುಸ್ಥಾಪಿಸಬೇಕು' ಎಂದು ಆಗ್ರಹಿಸಿದರು.
'ಯಾವುದೇ ಪ್ರದೇಶದಲ್ಲಿ ಹೆಚ್ಚು ಅಧಿಕಾರ ಕೇಂದ್ರಗಳಿದ್ದರೆ, ನಕಾರಾತ್ಮಕ ಪರಿಣಾಮ ಬೀರುತ್ತದೆ. ಒಂದು ಕ್ರೀಡಾ ತಂಡಕ್ಕೆ ಒಬ್ಬನೇ ನಾಯಕನಿರಬೇಕು. ಇದೇ ರೀತಿ ಕೇಂದ್ರ ಸರ್ಕಾರದಲ್ಲಿ ಎರಡು ಅಧಿಕಾರ ಕೇಂದ್ರಗಳು ಅಥವಾ ಇಬ್ಬರು ಪ್ರಧಾನಿಗಳನ್ನು ನಾವು ಹೊಂದಿಲ್ಲ. ನಮ್ಮ ದೇಶದ ರಾಜ್ಯಗಳಲ್ಲಿ ಒಬ್ಬ ಚುನಾಯಿತ ಮುಖ್ಯಮಂತ್ರಿಯು ತನ್ನ ಕ್ಯಾಬಿನೆಟ್‌ನೊಂದಿಗೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು.
ಇದೇ ವೇಳೆ, ದೆಹಲಿ ವಿಚಾರವನ್ನು ಪ್ರಸ್ತಾಪಿಸಿದ ಅವರು, 'ಎರಡು ಅಧಿಕಾರ ಕೇಂದ್ರಗಳು ಎಂದಿಗೂ ಒಟ್ಟಾಗಿ ಕೆಲಸ ಮಾಡುವುದಿಲ್ಲ. ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವಿನ ಸಂಬಂಧ ಉತ್ತಮವಾಗಿಲ್ಲದಿರುವುದು ಇದಕ್ಕೆ ಉದಾಹರಣೆ' ಎಂದರು.
'ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಟ್ಳಿಮಾತಿನಂತೆ ಜಮ್ಮು ಮತ್ತು ಕಾಶ್ಮೀರಕ್ಕೆ 'ರಾಜ್ಯತ್ವ' ನೀಡಬೇಕು' ಎಂದು ಅವರು ಹೇಳಿದರು.