ಬದಿಯಡ್ಕ: ನಿರಂತರ ಸಾಧನೆ ಮತ್ತು ಧನಾತ್ಮಕ ಚಿಂತನೆಯಿಂದ ಗುರಿ ತಲುಪಲು ಸಾಧ್ಯ ಎಂದು ಖ್ಯಾತ ಮನೋತಜ್ಞ ನವೀನ್ ಎಲ್ಲಂಗಳ ತಿಳಿಸಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 9 ಮತ್ತು 10ನೇ ತರಗತಿಯ ಮಕ್ಕಳು ಹಾಗೂ ಪಾಲಕರಿಗಾಗಿ ಶುಕ್ರವಾರ ಜರಗಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಧನಾತಕ್ಮ ಓದುವಿಕೆ ಹಾಗೂ ಗುರಿಸಿದ್ಧತೆ ಹೇಗೆ ಸಾಧ್ಯ ಎಂಬ ಕಾರ್ಯಾಗಾರದಲ್ಲಿ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಹೇಗೆ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಿಕೊಳ್ಳಬಹುದೆಂದು ಹಲವಾರು ಸಲಹೆಗಳನ್ನು ನೀಡಿದರು. ನಿರಂತರವಾಗಿ 21 ದಿನಗಳ ಕಾಲ ಧನಾತ್ಮಕ ಚಿಂತನೆಗಳೊಂದಿಗೆ ಮುಂದುವರಿದಾಗ ಅದು ಸುಪ್ತಮನಸ್ಸನ್ನು ಸೇರಿಕೊಳ್ಳುವುದರೊಂದಿಗೆ ಅದು ನಮ್ಮ ಜೀವನದ ಭಾಗವಾಗುತ್ತದೆ. ನಾವು ನಮ್ಮನ್ನೇ ವಿಮರ್ಷೆಮಾಡಿಕೊಳ್ಳುತ್ತಾ ನಮ್ಮೊಳಗಿನ ಉತ್ತಮ ವ್ಯಕಿತ್ವವನ್ನು ಪ್ರದರ್ಶಿಸಬೇಕು. ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಕ್ಕಳಲ್ಲಿ ಅಡಗಿರುವ ಸಂಶಯಗಳನ್ನು ಬಗೆಹರಿಸಿದರು.
ಶಾಲಾ ಆಡಳಿತ ಸಮಿತಿ ಸದಸ್ಯ ಮಧುಸೂದನ ತಿಮ್ಮಕಜೆ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಶಿಕ್ಷಕಿ ರಶ್ಮಿ ಪೆರ್ಮುಖ, ಪಾಲಕರು ಪಾಲ್ಗೊಂಡಿದ್ದರು.