ಮಂಜೇಶ್ವರ : ಸುಮಾರು 150 ವರ್ಷಗಳ ಪುರಾತನ ಇತಿಹಾಸವಿರುವ ಕುಂಜತ್ತೂರು ಜುಮಾ ಮಸೀದಿಯ ಅಧಿನದಲ್ಲಿರುವ ಮಹದನುಲ್ ಉಲೂಂ ಮದ್ರಸದ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿ ಕೊಳ್ಳಲಾಗಿರುವ ನಾಲ್ಕು ದಿವಸಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಬುಧವಾರ ಅದ್ದೂರಿ ಚಾಲನೆಗೆ ಮಸೀದಿ ಅಧ್ಯಕ್ಷ ಸಯ್ಯದ್ ಚಕ್ಕೂರ್ ರವರು ಧ್ವಜಾರೋಹಣಗೈಯುವುದರೊಂದಿಗೆ ಸಮಾರಂಭ ಆರಂಭಗೊಂಡಿತು.
1876ರಲ್ಲಿ ಆಲಿಕುಟ್ಟಿ ಅಜ್ಜ ಎಂಬವರಿಂದ ಸ್ಥಾಪಿತಗೊಂಡ ಕುಂಜತ್ತೂರು ಮಸೀದಿ 1957ರಲ್ಲಿ ಜುಮಾ ನಮಾಝ್ ಆರಂಭಗೊಳ್ಳುವ ತನಕ ಉದ್ಯಾವರ ಸಾವಿರ ಜಮಾಹತ್ ಅಧೀನದಲ್ಲಿ ನಡೆದು ಬಂದಿತ್ತು. ಬಳಿಕ ಸ್ವತಂತ್ರಗೊಂಡ ಈ ಮಸೀದಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಭ್ಯಾಸ ಬೋರ್ಡ್ ಅಂಗೀಕರಿಸಿದ ಮಹದನುಲ್ ಉಲೂಂ ಮದ್ರಸ ಇದೀಗ ತನ್ನ 50 ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ.
ಈ ಸುವರ್ಣ ಮಹೋತ್ಸವದ ಪ್ರಯುಕ್ತ ಬುಧವಾರದಿಂದ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲ್ಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಇದೀಗ ಅದ್ದೂರಿ ಚಾಲನೆ ದೊರಕಿದೆ.
ಬುಧವಾರ ಬೆಳಿಗ್ಗೆ ನಡೆದ ಧ್ವಜಾರೋಹಣ ಸಂಭ್ರಮದಲ್ಲಿ ಜಮಾಹತ್ ಖತೀಬ್ ಉಸ್ತಾದ್ ಹಾಶಿರ್ ಹಾಮಿದಿ ಪ್ರಾರ್ಥನೆ ನಡೆಸಿದರು. ಜಮಾತ್ ಕಾರ್ಯದರ್ಶಿ ಎಸ್ ಕೆ ಹನೀಫ್, ಕೋಶಾಧಿಕಾರಿ ಕೆಕೆ ಭಾವ, ಸದಸ್ಯರಾದ ಆಲಿಕುಟ್ಟಿ, ಕುಂಞÂ್ಞ ಮೋನು, ಹಂಝ, ಕುಂಞÂ್ಞ ಅಹ್ಮದ್ ಹಾಜಿ, ಸ್ವಾಗತ ಸಮಿತಿ ಅಧ್ಯಕ್ಷ ಉಸ್ಮಾನ್ ಕುಂಜತ್ತೂರು, ಉಪಾಧ್ಯಕ್ಷ ಅದ್ದು ಹಾಜಿ, ರಿಯಾಜ್, ಕನ್ವೀನರ್ ಶಫೀಕ್ ಹಾಗೂ ಇತರ ಸದಸ್ಯರು ಸದರ್ ಮುಅಲ್ಲಿಂ ಸಿದ್ದೀಕ್ ಅಜ್ಹರಿ ಹಾಗೂ ಇತರ ಅಧ್ಯಾಪಕರುಗಳು ಪಾಲ್ಗೊಂಡರು.
ಬುಧವಾರ ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಕುಂಜತ್ತೂರು ಖಾಝಿ ಉಸ್ತಾದ್ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 8 ಗಂಟೆಗೆ ನಡೆಯಲಿರುವ ನೂರೇ ಅಜ್ಮೀರ್ ಮಜ್ಲಿಸ್ ಗೆ ಉಸ್ತಾದ್ ವಲಿಯುದ್ಧೀನ್ ಫೈಝಿ ನೇತೃತ್ವ ನೀಡಲಿದ್ದಾರೆ. ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ 6.30 ಕ್ಕೆ ನಡೆಯಲಿರುವ ಗೋಲ್ಡನ್ ಜ್ಯುಬಿಲಿ ಗ್ರಾಂಡ್ ಮೀಟ್ ಸಯ್ಯದುಲ್ ಉಲಮಾ ಅಸಯ್ಯದ್ ಮುಹಮ್ಮದ್ ಜಿಫ್ರಿ ಮತ್ತು ಕೋಯ ತಂಘಲ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಂದು ಮಧ್ಯಾಹ್ನ 2.30 ಕ್ಕೆ ನಡೆಯಲಿರುವ ಹಳೆ ವಿದ್ಯಾರ್ಥಿ ಸಂಗಮವನ್ನು ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿದ್ದಾರೆ.