ನವದೆಹಲಿ: ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ದಾಖಲಿಸುವಾಗ 'ಕ್ರಿಮಿನಲ್ ಪಿತೂರಿ' ಅಂಶವನ್ನು ಮಾತ್ರ ನೆಚ್ಚಿಕೊಳ್ಳಬಾರದು ಎಂದು ಜಾರಿ ನಿರ್ದೇಶನಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ನ್ಯಾಯಾಲಯದ ಪರಿಶೀಲನೆ ಸಂದರ್ಭದಲ್ಲಿ ಪ್ರಕರಣವು ಬಿದ್ದುಹೋಗಬಾರದು ಎಂದಾದರೆ, ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಬೇಕು ಎಂದು ಇ.ಡಿ ಸೂಚಿಸಿದೆ.
ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು ನೀಡಿರುವ ಆದೇಶ, ತೀರ್ಪುಗಳನ್ನು ಆಧರಿಸಿ ಈ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಆದೇಶ, ತೀರ್ಪುಗಳ ಆಧಾರದಲ್ಲಿ ತನಿಖಾಧಿಕಾರಿಗಳು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 66(2)ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಆಗ ಅಧಿಕಾರಿಗಳಿಗೆ ಅಪರಾಧವೊಂದರ ಬಗ್ಗೆ ಪೊಲೀಸ್ ಅಥವಾ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಲು, ಅವರು ಎಫ್‌ಐಆರ್ ದಾಖಲಿಸಲು ಸಾಧ್ಯವಾಗುತ್ತದೆ. ಆ ಎಫ್‌ಐಆರ್ ಆಧರಿಸಿ ಇ.ಡಿ. ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಬಹುದು ಎಂಬ ಸೂಚನೆ ನೀಡಲಾಗಿದೆ ಎಂದು ಗೊತ್ತಾಗಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120-ಬಿ (ಈಗ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 61-2) ಮಾತ್ರವೇ ಹಣದ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯಗಳು ಹೇಳಿವೆ. ಕೆಲವು ಪ್ರಕರಣಗಳಲ್ಲಿ ಇ.ಡಿ ದಾಖಲಿಸಿದ್ದ ಎಫ್‌ಐಆರ್‌ಅನ್ನು ಕೋರ್ಟ್‌ಗಳು ರದ್ದುಪಡಿಸಿವೆ ಎಂದು ಮೂಲಗಳು ವಿವರಿಸಿವೆ.