ರಾಯಪುರ: ಎಡರಂಗದ ತೀವ್ರವಾದಿತನ (ಎಲ್‌ಡಬ್ಲ್ಯೂಇ) ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಹಾಗೂ ಏಜೆನ್ಸಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಛತ್ತೀಸಗಢದಲ್ಲಿ ಎಡರಂಗದ ತೀವ್ರವಾದಿತನ ಪರಿಸ್ಥಿತಿಯ ಕುರಿತು ಸೋಮವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'2026ರ ಮಾರ್ಚ್ ಅಂತ್ಯಕ್ಕೆ ಎಲ್‌ಡಬ್ಲ್ಯುಇ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿ ಪೊಲೀಸರು, ಭದ್ರತಾ ಪಡೆಗಳು, ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.
ಕಳೆದ ಒಂದು ವರ್ಷದಿಂದ ಉಗ್ರವಾದಿಗಳನ್ನು ಮಟ್ಟ ಹಾಕುವ ಅನೇಕ ಕಾರ್ಯಾಚರಣೆಗಳು ನಡೆದಿದ್ದು, ಇದು ಬಹುದೊಡ್ಡ ಯಶಸ್ಸು. 2026ರ ವೇಳೆಗೆ ಎಲ್‌ಡಬ್ಲ್ಯೂಇ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮತ್ತಷ್ಟು ಕಾರ್ಯಾಚರಣೆ, ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಸಿಆರ್‌ಪಿಎಫ್, ಐಟಿಬಿಪಿ, ಬಿಎಸ್‌ಎಫ್, ಛತ್ತೀಸ್‌ಗಢ ಪೊಲೀಸ್ ಮತ್ತು ಡಿಆರ್‌ಜಿ ಗುರಿಯನ್ನು ಸಾಧಿಸುವತ್ತ ಸಾಗಿವೆ. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಾತ್ರವೂ ಗಮನರ್ಹವಾಗಿದೆ ಎಂದು ಅಮಿತ್ ಶಾ ಶ್ಲಾಘಿಸಿದ್ದಾರೆ.