ವಾಷಿಂಗ್ಟನ್ : ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ, ತಹವ್ವುರ್ ರಾಣಾ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಅಮೆರಿಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲು ರಾಣಾನನ್ನು ಹಸ್ತಾಂತರಿಸುವಂತೆ ಭಾರತ, ಅಮೆರಿಕವನ್ನು ಕೋರುತ್ತಿದೆ.
ಸ್ಯಾನ್ ಫ್ರಾನ್ಸಿಸ್ಕೊದ ಮೇಲ್ಮನವಿ ನ್ಯಾಯಾಲಯ ಒಳಗೊಂಡಂತೆ ಅಮೆರಿಕದ ಹಲವು ನ್ಯಾಯಾಲಯಗಳು ಮತ್ತು ಫೆಡರಲ್ ಕೋರ್ಟ್, ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ಹೇಳಿದೆ. ಇದನ್ನು ಪ್ರಶ್ನಿಸಿ ರಾಣಾ ನವೆಂಬರ್ 13ರಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ.
ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಲು ಸುದೀರ್ಘ ಅವಧಿಯಿಂದ ಕಾನೂನು ಹೋರಾಟ ನಡೆಸುತ್ತಿರುವ ರಾಣಾ ಮುಂದಿರುವ ಕೊನೆಯ ಅವಕಾಶ ಇದಾಗಿದೆ.
'ರಾಣಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ವಜಾಗೊಳಿಸಬೇಕು' ಎಂದು ಅಮೆರಿಕದ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ. ಪ್ರಿಲಾಗರ್ ಅವರು ಡಿಸೆಂಬರ್ 16ರಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
'ಈ ಪ್ರಕರಣದಲ್ಲಿ ಹಸ್ತಾಂತರ ಪ್ರಕ್ರಿಯೆಯಿಂದ ಮುಕ್ತಿ ಪಡೆಯಲು ರಾಣಾ ಅರ್ಹರಲ್ಲ' ಎಂದು ಅವರು 20 ಪುಟಗಳ ಅರ್ಜಿಯಲ್ಲಿ ವಾದಿಸಿದ್ದಾರೆ.
'2018ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಿನಾಯ್ಸ್‌ನ (ಷಿಕಾಗೊ) ಫೆಡರಲ್ ನ್ಯಾಯಾಲಯದಿಂದ ವಿಚಾರಣೆ ಎದುರಿಸಿ, ಖುಲಾಸೆಗೊಂಡಿದ್ದೇನೆ. ಇದೀಗ ಭಾರತವು ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲು ಹಸ್ತಾಂತರಿಸುವಂತೆ ಕೋರುತ್ತಿದೆ' ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಣಾ ವಾದಿಸಿದ್ದಾನೆ.