ಪುಣೆ(PTI): 'ವಿಪರೀತ ವ್ಯಕ್ತಿವಾದ ಅಥವಾ ಸ್ವಾತಂತ್ರ್ಯವಾದ ಒಳ್ಳೆಯದಲ್ಲ. ಜನಸಂಖ್ಯೆ ಕುಸಿಯಲು ಇಂತಹ ಧೊರಣೆಯೇ ಕಾರಣ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಎಚ್ಚರಿಸಿದ್ದಾರೆ.
ಸಂಘಟನೆ ವತಿಯಿಂದ ಆಯೋಜಿಸಿರುವ 'ಹಿಂದೂ ಸೇವಾ ಮಹೋತ್ಸವ'ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
'ಸ್ವತಂತ್ರವಾಗಿರಬೇಕು ಅಥವಾ ಪ್ರತ್ಯೇಕವಾಗಿರಬೇಕು ಎಂಬ ವಾದಗಳಿಂದ ಪ್ರಭಾವಿತರಾದವರು ಕೌಟುಂಬಿಕ ವ್ಯವಸ್ಥೆ ಬೇಡ ಎಂಬ ನಿಲುವು ತಳೆಯುತ್ತಿದ್ದಾರೆ. ನಾವು ಏಕೆ ಮದುವೆಯಾಗಬೇಕು? ಯಾಕೆ ಮತ್ತೊಬ್ಬರ ಗುಲಾಮರಾಗಬೇಕು? ಎಂಬ ಭಾವನೆ ಇಂಥವರಲ್ಲಿ ಮೂಡುತ್ತಿದೆ' ಎಂದು ಹೇಳಿದ್ದಾರೆ.
'ಯಾವುದೇ ವ್ಯಕ್ತಿಗೆ ವೃತ್ತಿ ಕೂಡ ಮುಖ್ಯ. ಸಮಾಜ, ಪರಿಸರ, ದೇವರು ಹಾಗೂ ದೇಶದಿಂದಾಗಿಯೇ ವ್ಯಕ್ತಿಗೆ ಅಸ್ತಿತ್ವ ಇದೆ. ವ್ಯಕ್ತಿಗಳಾಗಿ ನಮ್ಮ ಮೇಲೆ ಇವುಗಳ ಋಣ ತುಂಬಾ ಇದೆ. ಆದರೆ, ವ್ಯಕ್ತಿವಾದದ ಫಲವಾಗಿ ನಮ್ಮ ಜನಸಂಖ್ಯೆ ಕ್ಷೀಣಿಸುತ್ತಿದೆ' ಎಂದಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ಗಿರಿ ಮಹಾರಾಜ್ ಮಾತನಾಡಿ,''ಬಟೇಂಗೆ ತೋ ಕಾಟೇಂಗೆ' (ಒಗ್ಗಟ್ಟಿನಿಂದ ಇರದಿದ್ದರೆ ವಿನಾಶವಾಗುತ್ತೇವೆ) ಸಂದೇಶವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಈಗ 'ಘಟೇಂಗೆ ತೋ ಭೀ ಕಾಟೇಂಗೆ' (ನಮ್ಮ ಜನಸಂಖ್ಯೆ ಕುಸಿದರೂ ನಾವು ನಾಶವಾಗುತ್ತೇವೆ) ಎಂಬ ಮತ್ತೊಂದು ಅಂಶವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು' ಎಂದರು.
'ಇದೇ ಕಾರಣಕ್ಕೆ ಹಿಂದೂಗಳ ಸಂಖ್ಯೆ ಹೆಚ್ಚಬೇಕು' ಎಂದೂ ಮಹಾರಾಜ್ ಪ್ರತಿಪಾದಿಸಿದರು.