ನವದೆಹಲಿ: ಇತಿಹಾಸ ಸಂಕೀರ್ಣವಾಗಿದೆ, ಇಂದಿನ ರಾಜಕೀಯವು ತನಗೆ ಬೇಕಿರುವ ಸಂಗತಿಗಳನ್ನು ಮಾತ್ರ ಎತ್ತಿಕೊಳ್ಳುವ ಕೆಲಸ ಮಾಡುತ್ತಿದೆ, ಟಿಪ್ಪು ಸುಲ್ತಾನ್ ವಿಚಾರದಲ್ಲಿಯೂ ಗಣನೀಯ ಹಂತದವರೆಗೆ ಇದೇ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಟಿಪ್ಪು ವಿಚಾರದಲ್ಲಿ 'ನಿರ್ದಿಷ್ಟವಾದ ಸಂಕಥನ'ವನ್ನು ಹಲವು ವರ್ಷಗಳಿಂದ ಮುಂದಕ್ಕೆ ತರಲಾಗುತ್ತಿದೆ ಎಂದು ಅವರು 'ಟಿಪ್ಪು ಸುಲ್ತಾನ್: ದಿ ಸಾಗಾ ಆಫ್ ಮೈಸೋರ್ ಇಂಟರೆಗ್ನಂ 1761-1799' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇತಿಹಾಸಕಾರ ವಿಕ್ರಂ ಸಂಪತ್ ಈ ಪುಸ್ತಕ ಬರೆದಿದ್ದಾರೆ.
'ಕಳೆದ ದಶಕದಲ್ಲಿ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಯು ಪರ್ಯಾಯ ದೃಷ್ಟಿಕೋನಗಳು ಹಾಗೂ ಸಮತೋಲಿತ ನೋಟದ ಬೆಳವಣಿಗೆಗೆ ಉತ್ತೇಜನ ನೀಡಿದೆ' ಎಂದು ಜೈಶಂಕರ್ ಹೇಳಿದ್ದಾರೆ. 'ನಾವು ಈಗ ಮತಬ್ಯಾಂಕ್ ವ್ಯವಸ್ಥೆಯ ಬಂಧಿಗಳಲ್ಲ. ಅಪ್ರಿಯವಾದ ಸತ್ಯಗಳನ್ನು ಹೇಳುವುದು ರಾಜಕೀಯವಾಗಿ ತಪ್ಪು ಕೆಲಸ ಕೂಡ ಅಲ್ಲ' ಎಂದಿದ್ದಾರೆ.
ಭಾರತದ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್ ಬಹಳ ಸಂಕೀರ್ಣ ವ್ಯಕ್ತಿ ಎಂದು ಹೇಳಿದ್ದಾರೆ. 'ಒಂದೆಡೆ, ಭಾರತದಲ್ಲಿ ಬ್ರಿಟಿಷ್ ವಸಾಹತು ನಿಯಂತ್ರಣಕ್ಕೆ ಪ್ರತಿರೋಧ ಒಡ್ಡಿದ ಖ್ಯಾತಿ ಟಿಪ್ಪುಗೆ ಇದೆ... ಅದೇ ಸಂದರ್ಭದಲ್ಲಿ, ಇಂದಿಗೂ ಮೈಸೂರು, ಕೊಡಗು, ಮಲಬಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆಲವರಲ್ಲಿ ಟಿಪ್ಪುವಿನ ಹೆಸರು ಪ್ರತಿಕೂಲವಾದ ಭಾವನೆ ಮೂಡಲು ಕಾರಣವಾಗುತ್ತದೆ' ಎಂದಿದ್ದಾರೆ.
ಸಮಕಾಲೀನ ಇತಿಹಾಸ ಬರಹಗಳು ರಾಷ್ಟ್ರಮಟ್ಟದಲ್ಲಿ ಮೊದಲಿನ ಆಯಾಮವನ್ನು ಕೇಂದ್ರೀಕರಿಸಿಕೊಂಡಿವೆ. ಎರಡನೆಯ ಆಯಾಮಕ್ಕೆ ಅವು ಕೊಡಬೇಕಿರುವ ಮಹತ್ವ ಕೊಟ್ಟಿಲ್ಲ. ಇದು ಆಕಸ್ಮಿಕವಾಗಿ ಹೀಗಾಗಿದ್ದಲ್ಲ ಎಂದು ಜೈಶಂಕರ್ ವಿವರಿಸಿದ್ದಾರೆ.
ವಿಕ್ರಂ ಸಂಪತ್ ಅವರು ಬರೆದಿರುವ ಪುಸ್ತಕವು, ಓದುಗರಿಗೆ ತಮ್ಮದೇ ಆದ ತೀರ್ಮಾನಕ್ಕೆ ಬರಲು ಟಿಪ್ಪುವಿನ ಬಗ್ಗೆ ಸತ್ಯ ಸಂಗತಿಗಳನ್ನು ತಿಳಿಸುತ್ತದೆ ಎಂದಿದ್ದಾರೆ.
ಟಿಪ್ಪು ಸುಲ್ತಾನ್ ಬಹಳ ತೀವ್ರವಾಗಿ ಬ್ರಿಟಿಷರ ವಿರುದ್ಧವಾಗಿ ಇದ್ದ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಬ್ರಿಟಿಷ್ ವಿರೋಧವು ಎಷ್ಟರಮಟ್ಟಿಗೆ ಆಂತರ್ಯದಿಂದ ಮೂಡಿದ್ದಾಗಿತ್ತು ಹಾಗೂ ತನ್ನ ಸ್ಥಳೀಯ ವಿರೋಧಿಗಳ ಜೊತೆ ಬ್ರಿಟಿಷರು ಕೈಜೋಡಿಸಿದ್ದ ಕಾರಣಕ್ಕಾಗಿ ಎಷ್ಟರಮಟ್ಟಿಗೆ ಬ್ರಿಟಿಷ್ ವಿರೋಧ ಆತನಲ್ಲಿ ಮೂಡಿತ್ತು ಎಂಬುದನ್ನು ಪ್ರತ್ಯೇಕಿಸಿ ಹೇಳುವುದು ಬಹಳ ಕಷ್ಟದ ಕೆಲಸ ಎಂದು ಜೈಶಂಕರ್ ಹೇಳಿದ್ದಾರೆ.